ಇತ್ತೀಚಿನ ದಿನಗಳಲ್ಲಿ ಭಾರತದ ಆರ್ಥಿಕತೆಯ ಏರಿಳಿತಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ, “ನಮ್ಮ ದೇಶದ ಆರ್ಥಿಕ ಸವಾಲುಗಳಿಗೆ (India’s economy) ಆಂತರಿಕ ಕಾರಣಗಳಿಗಿಂತ ಜಾಗತಿಕ ವಿದ್ಯಮಾನಗಳೇ ಮುಖ್ಯ ಕಾರಣ” ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ. ಮುಂಬೈನಲ್ಲಿ ನಡೆದ ಸಿಡ್ಬಿ (SIDBI) ಸಂಸ್ಥೆಯ 37ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ದೇಶದ ಆರ್ಥಿಕತೆ ಸದೃಢವಾಗಿದ್ದು, ಎಂತಹದೇ ಬಾಹ್ಯ ಬಿಕ್ಕಟ್ಟು ಎದುರಾದರೂ ಪುಟಿದೇಳುವ ಶಕ್ತಿ ಹೊಂದಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ಏಷ್ಯಾ (Middle East) ಬಿಕ್ಕಟ್ಟು ಹಾಗೂ ಹಾರ್ಮುಜ್ ಜಲಸಂಧಿಯ ಸಂಘರ್ಷದಿಂದಾಗಿ ಇಡೀ ಜಗತ್ತೇ ತಲ್ಲಣಿಸಿದೆ. ಇದರ ನೇರ ಪರಿಣಾಮವಾಗಿ ಭಾರತ ಪ್ರಸ್ತುತ ಇಂಧನ, ಗೊಬ್ಬರ ಮತ್ತು ವಿದೇಶೀ ವಿನಿಮಯ ಎಂಬ ಮೂರು ಪ್ರಮುಖ ಜಾಗತಿಕ ಸವಾಲುಗಳನ್ನು ಎದುರಿಸುತ್ತಿದ್ದು, ಸರ್ಕಾರ ಇವುಗಳ ಮೇಲೆ ತೀವ್ರ ನಿಗಾ ಇಟ್ಟಿದೆ ಎಂದು ಸಚಿವರು ತಿಳಿಸಿದರು.
ಸುಳ್ಳು ಭಯ ಸೃಷ್ಟಿಸುವವರ ವಿರುದ್ಧ ವಿತ್ತ ಸಚಿವೆ ಕಿಡಿ!
ದೇಶದಲ್ಲಿ ಎಲ್ಲವೂ ಕುಸಿದುಬೀಳುತ್ತಿದೆ ಎಂಬಂತೆ ಬಿಂಬಿಸುತ್ತಿರುವ ವಿಮರ್ಶಕರನ್ನು ಸಚಿವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಸಾಮಾನ್ಯ ಜನರು ಮತ್ತು ಉದ್ಯಮಿಗಳು ಕಷ್ಟಪಟ್ಟು ಸಾಧಿಸುತ್ತಿರುವ ಪ್ರಗತಿಯನ್ನು ಮರೆತು, ಕೇವಲ ನಕಾರಾತ್ಮಕ ವಾತಾವರಣ ಸೃಷ್ಟಿಸುತ್ತಿರುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, “ಭಾರತವು ಸುಳ್ಳು ಭಯ ಮತ್ತು ಆತಂಕದ ವಾತಾವರಣ ಸೃಷ್ಟಿಸುವುದನ್ನು ಸಹಿಸುವುದಿಲ್ಲ. ನಮ್ಮ ಮಾತು ಮತ್ತು ಕೃತಿಗಳ ಮೂಲಕ ಜನರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡಬೇಕೇ ಹೊರತು ನಿರಾಶಾವಾದವನ್ನಲ್ಲ” ಎಂದರು.

ಭಾರತದ ಆರ್ಥಿಕತೆ ಸದೃಢವಾಗಿದೆ ಅನ್ನೋದಕ್ಕೆ ಇಲ್ಲಿದೆ ಸಾಕ್ಷಿ:
ಬಾಹ್ಯ ಸವಾಲುಗಳ ನಡುವೆಯೂ ಭಾರತದ ಆಂತರಿಕ ಆರ್ಥಿಕತೆ ಎಷ್ಟು ಗಟ್ಟಿಯಾಗಿದೆ ಎಂಬುದಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ಕೆಲವು ಪ್ರಮುಖ ಉದಾಹರಣೆಗಳನ್ನು ನೀಡಿದ್ದಾರೆ:
-
ಜಿಎಸ್ಟಿ ಸಂಗ್ರಹದಲ್ಲಿ ದಾಖಲೆ: ದೇಶದ ಜಿಎಸ್ಟಿ (GST) ಸಂಗ್ರಹವು ಶೇಕಡಾ 8.3 ರಷ್ಟು ಬೆಳವಣಿಗೆಯೊಂದಿಗೆ ಬರೋಬ್ಬರಿ 22 ಲಕ್ಷ ಕೋಟಿ ರೂ. ದಾಟಿದೆ.
-
ವಾಹನ ಮಾರಾಟದಲ್ಲಿ ಭರ್ಜರಿ ಏರಿಕೆ: ದೇಶೀಯವಾಗಿ ಟ್ರ್ಯಾಕ್ಟರ್ ಮಾರಾಟದಲ್ಲಿ ಶೇ. 26 ರಷ್ಟು ಮತ್ತು ಪ್ರಯಾಣಿಕ ವಾಹನಗಳ (Passenger Vehicles) ಮಾರಾಟದಲ್ಲಿ ಶೇ. 25 ರಷ್ಟು ಗಮನಾರ್ಹ ಹೆಚ್ಚಳವಾಗಿದೆ.
-
ಸಾಲದ ಸೌಲಭ್ಯ: ರೀಟೇಲ್, ಕೃಷಿ ಮತ್ತು ಎಂಎಸ್ಎಂಇ (MSME) ವಲಯಗಳಲ್ಲಿ ಸಾಲದ ಬೆಳವಣಿಗೆ ಉತ್ತಮವಾಗಿದ್ದು, ಮಾರುಕಟ್ಟೆಯಲ್ಲಿ ಚಟುವಟಿಕೆಗಳು ಚುರುಕಾಗಿವೆ.
ಜನಸಾಮಾನ್ಯರ ರಕ್ಷಣೆಗೆ ಸರ್ಕಾರದ ಮಾಸ್ಟರ್ ಪ್ಲಾನ್
ಜಾಗತಿಕವಾಗಿ ತೈಲ ಬೆಲೆ ಏರಿಕೆಯಾಗುತ್ತಿದ್ದರೂ, ಅದರ ಬಿಸಿ ಭಾರತದ ಜನಸಾಮಾನ್ಯರಿಗೆ ತಟ್ಟದಂತೆ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಲಾಗಿದೆ. ಇದರಿಂದಾಗಿ ಸರ್ಕಾರಕ್ಕೆ ಸುಮಾರು 1 ಲಕ್ಷ ಕೋಟಿ ರೂ.ಗೂ ಅಧಿಕ ಆದಾಯ ನಷ್ಟವಾಗುತ್ತಿದ್ದರೂ, ಜನರ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಷ್ಟೇ ಅಲ್ಲದೆ, ಜಾಗತಿಕ ಬಿಕ್ಕಟ್ಟಿನಿಂದಾಗಿ ಸರಕು ಸಾಗಣೆ ತಡವಾಗುತ್ತಿರುವುದರಿಂದ ರಫ್ತುದಾರರಿಗೆ ನೆರವಾಗಲು ಕಸ್ಟಮ್ಸ್ ಪ್ರಕ್ರಿಯೆಗಳನ್ನು ಇನ್ನಷ್ಟು ಸರಳಗೊಳಿಸಲಾಗಿದೆ.
ಎಂಎಸ್ಎಂಇ (MSME) ಉದ್ಯಮಗಳಿಗೆ ಸಿಕ್ಕಿತು ಬಿಗ್ ಬೂಸ್ಟ್!
ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ದೇಶದ ಆರ್ಥಿಕತೆಯ ಬೆನ್ನೆಲುಬು. ಇವುಗಳ ಅಭಿವೃದ್ಧಿಗಾಗಿ ತುರ್ತು ಸಾಲ ಸೌಲಭ್ಯ ಗ್ಯಾರಂಟಿ ಯೋಜನೆ (ECLGS 5.0) ಅಡಿಯಲ್ಲಿ 2.55 ಲಕ್ಷ ಕೋಟಿ ರೂ. ಹೆಚ್ಚುವರಿ ಸಾಲ ಒದಗಿಸಲಾಗುತ್ತಿದ್ದು, ಇದಕ್ಕೆ ಕೇಂದ್ರ ಸರ್ಕಾರವೇ 100% ಗ್ಯಾರಂಟಿ ನೀಡಲಿದೆ. ಇದರೊಂದಿಗೆ, ಸಾರ್ವಜನಿಕ ವಲಯದ ಸಂಸ್ಥೆಗಳು (PSUs) ಸಣ್ಣ ಉದ್ಯಮಿಗಳಿಗೆ ಬಾಕಿ ಇರುವ ಹಣವನ್ನು ಯಾವುದೇ ವಿಳಂಬವಿಲ್ಲದೆ 45 ದಿನಗಳ ಒಳಗಾಗಿ ಪಾವತಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಜಾಗತಿಕ ಯುದ್ಧ ಮತ್ತು ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟಿನಿಂದಾಗಿ ಇಂಧನ ಹಾಗೂ ರಫ್ತು ವೆಚ್ಚ ಹೆಚ್ಚಾಗುತ್ತಿರುವುದು ನಿಜ. ಆದರೆ, ಭಾರತ ಸರ್ಕಾರವು ಮುನ್ನೆಚ್ಚರಿಕೆ ಕ್ರಮಗಳು, ತೆರಿಗೆ ಕಡಿತ ಮತ್ತು ಉದ್ಯಮಗಳಿಗೆ ಸೂಕ್ತ ರಕ್ಷಣೆ ನೀಡುವ ಮೂಲಕ ಈ ಜಾಗತಿಕ ಹೊರೆಯನ್ನು ದೇಶದ ಜನರ ಮೇಲೆ ಬೀಳದಂತೆ ಯಶಸ್ವಿಯಾಗಿ ನಿರ್ವಹಿಸುತ್ತಿದೆ.






