Chikkaballapur City Municipal Council faces heavy backlash from Ward 10 residents:- ಹೊರಗೆ ಕೊಳಕು, ಒಳಗೆ ಹುಳುಕು! ಸ್ವಚ್ಛ ನಗರಕ್ಕೆ ಕಳಂಕ ತರುತ್ತಿದೆಯೇ ಚಿಕ್ಕಬಳ್ಳಾಪುರ ನಗರಸಭೆ?

ಚಿಕ್ಕಬಳ್ಳಾಪುರ: “ಹೊರಗೆ ಚಂದ, ಒಳಗೆ ಕೊಳಕು” ಎನ್ನುವ ಮಾತು ಸದ್ಯ ಚಿಕ್ಕಬಳ್ಳಾಪುರ ನಗರಸಭೆಯ (Chikkaballapur City Municipal Council) ಕಾರ್ಯವೈಖರಿಗೆ ಅಚ್ಚುಕಟ್ಟಾಗಿ ಅನ್ವಯಿಸುವಂತಿದೆ. ಇಡೀ ನಗರವನ್ನು ಸ್ವಚ್ಛವಾಗಿಡಬೇಕಾದ ಅಧಿಕಾರಿಗಳು, ಕೇವಲ ಜಿಲ್ಲಾಧಿಕಾರಿಗಳ (DC) ಮೆಚ್ಚುಗೆ ಗಳಿಸಲು ಮಾತ್ರ ಕೆಲಸ ಮಾಡುತ್ತಿದ್ದಾರಾ? ನಗರಸಭೆಯ ಸ್ವಚ್ಛತಾ ಕಾರ್ಯ ಕೇವಲ ಬಿ.ಬಿ. ರಸ್ತೆಗೆ ಮಾತ್ರ ಸೀಮಿತವಾಗಿದೆಯೇ? ಇಂತಹ ನೂರಾರು ಆಕ್ರೋಶದ ಪ್ರಶ್ನೆಗಳು ಸದ್ಯ ಚಿಕ್ಕಬಳ್ಳಾಪುರ ನಗರದ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.

ಇದಕ್ಕೆ ಬಲವಾದ ಕಾರಣವೂ ಇದೆ. ನಗರಸಭೆಯ ಅಧಿಕಾರಿಗಳು ಮತ್ತು ಪೌರಾಯುಕ್ತರ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿ ನಗರದ 10ನೇ ವಾರ್ಡ್‌ನ ಚರಂಡಿಗಳು ಮತ್ತು ಕಸದ ರಾಶಿಗಳು ಕಣ್ಣೆದುರಿಗೇ ನಿಂತಿವೆ.

ಸೊಳ್ಳೆಗಳ ಉತ್ಪಾದನಾ ಕೇಂದ್ರವಾದ 10ನೇ ವಾರ್ಡ್!

ಚಿಕ್ಕಬಳ್ಳಾಪುರ ನಗರದ 10ನೇ ವಾರ್ಡ್ ವ್ಯಾಪ್ತಿಯ ಉಷೋದಯ ಶಾಲೆ ಸುತ್ತಮುತ್ತಲಿನ ಪರಿಸ್ಥಿತಿಯನ್ನು ನೋಡಿದರೆ ಯಾರಿಗಾದರೂ ಮರುಕ ಹುಟ್ಟದೇ ಇರದು. ಇಲ್ಲಿನ ತೆರೆದ ಚರಂಡಿಗಳು ಸಂಪೂರ್ಣವಾಗಿ ಕಸದಿಂದ ಮುಚ್ಚಿಹೋಗಿವೆ. ಮಳೆ ನೀರು ಸರಾಗವಾಗಿ ಹರಿದು ಹೋಗಲು ಜಾಗವಿಲ್ಲದೆ ಚರಂಡಿಯಲ್ಲೇ ನಿಂತು ಕೊಳೆಯುತ್ತಿದ್ದು, ಇಡೀ ಪ್ರದೇಶ ಸಾಂಕ್ರಾಮಿಕ ರೋಗಗಳನ್ನು ಹರಡುವ ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದೆ.

ತಿಂಗಳುಗಳಿಂದ ತುಂಬಿಕೊಂಡಿರುವ ಚರಂಡಿ, ಬೆಟ್ಟದಂತೆ ಅಚ್ಚುಮಚ್ಚಾಗಿ ಬೆಳೆದು ನಿಂತಿರುವ ಕಸದ ಗುಡ್ಡೆಗಳು ಇಲ್ಲಿನ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಜೀವಂತ ಸಾಕ್ಷಿಯಾಗಿವೆ. ಮಳೆಗಾಲ ಆರಂಭವಾಗಿದ್ದರೂ ನಗರಸಭೆ ಅಧಿಕಾರಿಗಳು ಮಾತ್ರ ಈ ಕಡೆ ತಲೆಹಾಕಿಯೂ ಮಲಗಿಲ್ಲ.

ಸ್ಥಳೀಯರ ಅಳಲು: “ದಿನದಿಂದ ದಿನಕ್ಕೆ ಕಸ ಹೆಚ್ಚುತ್ತಿದೆ, ಚರಂಡಿ ದುರ್ವಾಸನೆ ಬೀರುತ್ತಿದೆ. ಸೊಳ್ಳೆಗಳ ಕಾಟ, ಹಾವು-ಚೇಳುಗಳ ಭೀತಿಯಲ್ಲೇ ನಾವು ದಿನ ಕಳೆಯಬೇಕಾಗಿದೆ. ಕಸದ ಗಾಡಿಯವರು ನಾವು ಕಸ ತಂದುಕೊಟ್ಟರೆ ಮಾತ್ರ ತಗೋತಾರೆ, ಇಲ್ಲದಿದ್ದರೆ ಇಲ್ಲ. ಪ್ರತಿದಿನ ನಗರಸಭೆಗೆ ಹೋಗಿ ದೂರು ನೀಡಿದರೂ ಯಾರೂ ಕ್ಯಾರೆ ಎನ್ನುತ್ತಿಲ್ಲ.”

ಪೌರಾಯುಕ್ತರಿಗೆ 10ನೇ ವಾರ್ಡ್ ಎಲ್ಲಿದೆ ಅಂತ ಗೊತ್ತಿಲ್ವಾ?

ಚಿಕ್ಕಬಳ್ಳಾಪುರ ನಗರಸಭೆಯ ಪೌರಾಯುಕ್ತರಾದ ಮನ್ಸೂರ್ ಅಲಿ ಅವರು ಬಂದು ಸುಮಾರು ಒಂದೂವರೆ ವರ್ಷ ಕಳೆದಿದೆ. ಆದರೆ, ದುರದೃಷ್ಟವಶಾತ್ ಅವರು ಈವರೆಗೆ ನಗರದ ವಾರ್ಡುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎನ್ನುತ್ತಾರೆ ಸ್ಥಳೀಯರು. ನಗರದ ಪ್ರಮುಖ ರಸ್ತೆಯಾದ ಬಿ.ಬಿ. ರಸ್ತೆಗೆ ಟ್ಯಾಂಕರ್ ನೀರು ಸುರಿದು, ಅಚ್ಚುಕಟ್ಟಾಗಿ ಸ್ವಚ್ಛಗೊಳಿಸುವ ಪೌರಾಯುಕ್ತರಿಗೆ ಬಹುಶಃ 10ನೇ ವಾರ್ಡ್ ಎಲ್ಲಿದೆ ಅನ್ನೋದೇ ಮರೆತುಹೋಗಿರುವಂತಿದೆ!

ಜಿಲ್ಲಾಧಿಕಾರಿಗಳು ಸಂಚರಿಸುವ ರಸ್ತೆ ಕ್ಲೀನ್ ಆಗಿದ್ದರೆ ಇಡೀ ನಗರವೇ ಸ್ವಚ್ಛವಾಗಿದೆ ಎಂದು ತೋರಿಸಿಕೊಳ್ಳುವ ನಾಟಕೀಯ ಪ್ರಯತ್ನ ಇದಾಗಿರಬಹುದು ಎಂಬುದು ನಾಗರಿಕರ ನೇರ ಆರೋಪವಾಗಿದೆ. ಇದು ಕೇವಲ 10ನೇ ವಾರ್ಡ್ ಕಥೆಯಲ್ಲ, ನಗರದ ಒಟ್ಟು 31 ವಾರ್ಡುಗಳ ಪರಿಸ್ಥಿತಿಯೂ ಹೆಚ್ಚು ಕಡಿಮೆ ಹೀಗೆಯೇ ಇದೆ.

ನಗರಸಭೆ ಕಚೇರಿಗೆ ಕಸ ಸುರಿಯಲು ಸಾರ್ವಜನಿಕರ ಸಿದ್ಧತೆ!

ಅಧಿಕಾರಿಗಳ ಈ ನಿರಂತರ ನಿರ್ಲಕ್ಷ್ಯದಿಂದ ಬೇಸತ್ತಿರುವ ಜಾಗೃತ ನಾಗರಿಕರು ಮತ್ತು ವಾರ್ಡಿನ ನಿವಾಸಿಗಳು ಈಗ ರೊಚ್ಚಿಗೆದ್ದಿದ್ದಾರೆ. ಸಾರ್ವಜನಿಕರ ತಾಳ್ಮೆಯ ಕಟ್ಟೆ ಒಡೆದಿದ್ದು, ವಾರ್ಡ್‌ನಲ್ಲಿ ಶೇಖರಣೆಯಾಗಿರುವ ಕಸವನ್ನು ಟ್ರ್ಯಾಕ್ಟರ್‌ಗೆ ತುಂಬಿಕೊಂಡು ನೇರವಾಗಿ ನಗರಸಭೆ ಕಚೇರಿಯ ಆವರಣದಲ್ಲೇ ಸುರಿಯಲು ತೀವ್ರ ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಹಾವು, ಚೇಳುಗಳ ಭಯ ಹಾಗೂ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಬದುಕುಳಿಯಲು ಹೆಣಗಾಡುತ್ತಿರುವ ಜನರಿಗೆ ಈಗ ತಕ್ಷಣದ ಪರಿಹಾರ ಬೇಕಾಗಿದೆ.

ಮುಂದಿನ ನಡೆ ಏನು?

ಇನ್ನಾದರೂ ಚಿಕ್ಕಬಳ್ಳಾಪುರ ನಗರಸಭೆ ಅಧಿಕಾರಿಗಳು ಮತ್ತು ಪೌರಾಯುಕ್ತರು ಕೊಠಡಿಗಳಿಂದ ಹೊರಬಂದು, ಕೇವಲ ಪ್ರಮುಖ ರಸ್ತೆಗಳ ಮೇಲಿನ ನಾಟಕೀಯ ಸ್ವಚ್ಛತೆಯನ್ನು ಬಿಟ್ಟು, ವಾರ್ಡುಗಳ ವಾಸ್ತವ ಪರಿಸ್ಥಿತಿಯನ್ನು ಸುಧಾರಿಸುತ್ತಾರಾ? ಅಥವಾ ಸಾರ್ವಜನಿಕರ ಉಗ್ರ ಪ್ರತಿಭಟನೆಯ ಬಿಸಿಯನ್ನು ಎದುರಿಸಲು ಸಿದ್ಧರಾಗುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles