ಮುಂಬೈನ (Maharashtra) ಆಘಾತಕಾರಿ ಕೊಲೆ ಪ್ರಕರಣವೊಂದರ ಸಿನಿಮಾ ಶೈಲಿಯ ಕ್ರಿಮಿನಲ್ ಪ್ಲಾನ್ ಈಗ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಮದುವೆಯಾಗಬೇಕಿದ್ದ ಭಾವಿ ಪತಿಯನ್ನೇ ಯುವತಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಅತ್ಯಂತ ಕ್ರೂರವಾಗಿ ಕಂದಕಕ್ಕೆ ತಳ್ಳಿ ಕೊಲೆ ಮಾಡಿರುವ ಆಘಾತಕಾರಿ ರಹಸ್ಯಗಳು ತನಿಖೆಯಲ್ಲಿ ಬಯಲಾಗಿವೆ.
ನಿಶ್ಚಿತಾರ್ಥ ಮುರಿದರೆ ಕುಟುಂಬಕ್ಕೆ ಅವಮಾನವಾಗುತ್ತದೆ ಎಂಬ ವಿಚಿತ್ರ ಕಾರಣ ನೀಡಿ, ಇಡೀ ಸಂಸಾರವನ್ನೇ ಕಣ್ಣೀರಡಲಲ್ಲಿ ಮುಳುಗಿಸಿದ ಈ ಘಟನೆಯ ಸಂಪೂರ್ಣ ಇನ್‌ಸೈಡ್ ಸ್ಟೋರಿ ಇಲ್ಲಿದೆ.
2,004 ಕರೆಗಳು, 238 ಗಂಟೆಗಳ ಮಾತುಕತೆ!
ಬೆಚ್ಚಿಬೀಳಿಸುವ ಈ ಕೊಲೆ ಪ್ರಕರಣದ ಮಾಸ್ಟರ್‌ಮೈಂಡ್ ಬೇರೆ ಯಾರೂ ಅಲ್ಲ, ಮೃತರ ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ. ಪೊಲೀಸರು ಇವರಿಬ್ಬರ ಕಾಲ್ ರೆಕಾರ್ಡ್ಸ್ (CDR) ಪರಿಶೀಲಿಸಿದಾಗ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ. ಕಳೆದ ಕೇವಲ ಆರು ತಿಂಗಳ ಅವಧಿಯಲ್ಲಿ ಇವರಿಬ್ಬರ ನಡುವೆ ಬರೋಬ್ಬರಿ 2,004 ಫೋನ್ ಕರೆಗಳು ನಡೆದಿವೆ!
ಇಬ್ಬರೂ ಸೇರಿ ಸುಮಾರು 238 ಗಂಟೆಗಳ ಕಾಲ ಫೋನ್‌ನಲ್ಲಿ ಮಾತನಾಡಿದ್ದಾರೆ. ಕೆಲವು ಕರೆಗಳಂತೂ ಸತತ 2 ರಿಂದ 3 ಗಂಟೆಗಳ ಕಾಲ ಮುಂದುವರಿದಿದ್ದು, ಈ ಸುದೀರ್ಘ ಮಾತುಕತೆಯಲ್ಲೇ ಕೊಲೆಯ ಸಂಚು ಅಡಗಿತ್ತು ಎಂಬುದು ಪೊಲೀಸರ ತನಿಖೆಯಿಂದ ದೃಢಪಟ್ಟಿದೆ.
ಕೆಫೆಯಲ್ಲಿ ಕೊಲೆ ಸಂಚು: ಸಿಸಿಟಿವಿ ವಿಡಿಯೋ ವೈರಲ್
ಪುಣೆಯ ಪ್ರಸಿದ್ಧ ಉದ್ಯಮಿಯ ಪುತ್ರ ಕೇತನ್ ಅಗರ್ವಾಲ್ ಹಾಗೂ ಸಿಯಾ ಗೋಯಲ್ ನಡುವೆ ಕಳೆದ ಫೆಬ್ರವರಿಯಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ನಡೆದಿತ್ತು. ಬರುವ ನವೆಂಬರ್‌ನಲ್ಲಿ ಉದಯಪುರದಲ್ಲಿ ಮದುವೆ ಫಿಕ್ಸ್ ಆಗಿತ್ತು. ಆದರೆ ಸಿಯಾಗೆ ಈ ಮದುವೆ ಇಷ್ಟವಿರಲಿಲ್ಲ. ತನ್ನ ಪ್ರಿಯಕರ ಚೇತನ್ ಜೊತೆಗಿನ ಸಂಬಂಧಕ್ಕೆ ಕೇತನ್ ಅಡ್ಡಿಯಾಗಿದ್ದಾನೆ ಎಂದು ಭಾವಿಸಿದ ಆಕೆ, ಆತನನ್ನು ಮುಗಿಸಲು ಪ್ಲಾನ್ ಮಾಡಿದ್ದಳು.

ಜೂನ್ 18 ರಂದು ಕೊಲೆ ನಡೆಯುವ ಕೆಲವೇ ಗಂಟೆಗಳ ಮೊದಲು ಪುಣೆಯ ಕೆಫೆಯೊಂದರಲ್ಲಿ ಸಿಯಾ ಮತ್ತು ಚೇತನ್ ಭೇಟಿಯಾಗಿದ್ದರು. ಕೇತನ್‌ನನ್ನು ಹೇಗೆ ಕೊಲೆ ಮಾಡಬೇಕು, ಕೋಟೆಯ ಯಾವ ಸ್ಥಳದಿಂದ ತಳ್ಳಿದರೆ ಆತ ಬದುಕಲು ಸಾಧ್ಯವಿಲ್ಲ ಎಂಬುದನ್ನು ಕಾಫಿ ಕುಡಿಯುತ್ತಲೇ ಇಬ್ಬರೂ ಸ್ಕೆಚ್ ಹಾಕಿದ್ದರು. ಸದ್ಯ ಈ ಕೆಫೆಯ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಟ್ರೆಕ್ಕಿಂಗ್ ನೆಪದಲ್ಲಿ 400 ಅಡಿ ಆಳದ ಕಂದಕಕ್ಕೆ ತಳ್ಳಿದರು!
ಅದೇ ದಿನ (ಜೂನ್ 18) ಮಧ್ಯಾಹ್ನ ಸಿಯಾ, ಕೇತನ್‌ನನ್ನು ಲೋಹಗಡ್ ಕೋಟೆಗೆ (Lohagad Fort) ಟ್ರೆಕ್ಕಿಂಗ್ ನೆಪದಲ್ಲಿ ಕರೆದೊಯ್ದಿದ್ದಾಳು. ಇತ್ತ ಪ್ರಿಯಕರ ಚೇತನ್ ಕೂಡ ವೇಷ ಮರೆಸಿಕೊಂಡು ಇವರನ್ನು ಹಿಂಬಾಲಿಸಿದ್ದಾನೆ. ಕೋಟೆಯ ನಿರ್ಜನ ಪ್ರದೇಶ ತಲುಪುತ್ತಿದ್ದಂತೆ ಸಿಯಾ ಮತ್ತು ಚೇತನ್ ಇಬ್ಬರೂ ಸೇರಿ ಕೇತನ್‌ನನ್ನು 400 ಅಡಿ ಆಳದ ಕಂದಕಕ್ಕೆ ತಳ್ಳಿದ್ದಾರೆ.
ಘಟನೆ ನಡೆದ ಬಳಿಕ ಸಿಯಾ ಅತ್ಯಂತ ನಾಟಕೀಯವಾಗಿ ಕೇತನ್ ಕಾಲು ಜಾರಿ ಕಣಿವೆಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ಕುಟುಂಬದವರಿಗೆ ನಂಬಿಸಿದ್ದಳು. ಆರಂಭದಲ್ಲಿ ಎಲ್ಲರೂ ಇದನ್ನು ಅಪಘಾತ ಎಂದೇ ಭಾವಿಸಿದ್ದರು.
ತನಿಖೆಗೆ ತಿರುವು ಕೊಟ್ಟ 33 ಡಿಗ್ರಿ ಸೆಲ್ಸಿಯಸ್ ಬಿಸಿಲು ಮತ್ತು ಆ ಹಳದಿ ಹೂಡಿ!
ಪೊಲೀಸರು ಕೋಟೆಯ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿತು. ಅಂದು ಅಲ್ಲಿ 33 ಡಿಗ್ರಿ ಸೆಲ್ಸಿಯಸ್‌ನಷ್ಟು ವಿಪರೀತ ಬಿಸಿಲಿತ್ತು. ಅಂತಹ ಸೆಖೆಯಲ್ಲೂ ಒಬ್ಬ ವ್ಯಕ್ತಿ ದಪ್ಪನೆಯ ಹಳದಿ ಬಣ್ಣದ ಹೂಡಿ (Hoodie) ಧರಿಸಿ, ಮುಖ ಮುಚ್ಚಿಕೊಂಡು ಸಿಯಾ ಮತ್ತು ಕೇತನ್‌ನನ್ನು ಹಿಂಬಾಲಿಸುತ್ತಿರುವುದು ಸಿಸಿಟಿವಿಯಲ್ಲಿ ಕಂಡುಬಂದಿತ್ತು.
ಪೊಲೀಸರ ಅನುಮಾನ: ಈ ತರಹದ ಸುಡುವ ಬಿಸಿಲಿನಲ್ಲಿ ಯಾರಾದರೂ ದಪ್ಪ ಹೂಡಿ ಧರಿಸುತ್ತಾರಾ? ಈ ಒಂದು ಸಣ್ಣ ಸುಳಿವು ಪೊಲೀಸರ ಅನುಮಾನವನ್ನು ತೀವ್ರಗೊಳಿಸಿತು. ಕೊನೆಗೆ ಸೋಷಿಯಲ್ ಮೀಡಿಯಾ ಖಾತೆಗಳು ಹಾಗೂ ಕಾಲ್ ಹಿಸ್ಟರಿ ಆಧರಿಸಿ ತನಿಖೆ ನಡೆಸಿದಾಗ, ಆ ಹೂಡಿ ಧರಿಸಿದ್ದ ವ್ಯಕ್ತಿ ಸಿಯಾಳ ಪ್ರಿಯಕರ ಚೇತನ್ ಚೌಧರಿ ಎಂಬುದು ಬಯಲಾಯಿತು.
ಇದು ಮೊದಲ ಯತ್ನವಾಗಿರಲಿಲ್ಲ!
ತನಿಖೆಯ ವೇಳೆ ಪೊಲೀಸರಿಗೇ ಶಾಕ್ ಕೊಡುವ ಮತ್ತೊಂದು ವಿಷಯ ಹೊರಬಿದ್ದಿದೆ. ಕೇತನ್‌ನನ್ನು ಕೊಲ್ಲಲು ಸಿಯಾ ಈ ಹಿಂದೆಯೂ ಹಲವು ಬಾರಿ ಯತ್ನಿಸಿದ್ದಳು:
-
ಮೇ 31: ಮೊದಲ ಬಾರಿಗೆ ಇದೇ ಕೋಟೆಗೆ ಕೇತನ್‌ನನ್ನು ಸಿಯಾ ಕರೆದೊಯ್ದಿದ್ದಳು, ಆದರೆ ಪ್ಲಾನ್ ವರ್ಕೌಟ್ ಆಗಿರಲಿಲ್ಲ.
-
ಜೂನ್ 4: ಮತ್ತೊಮ್ಮೆ ಹೋಗಲು ಒತ್ತಾಯಿಸಿದ್ದರೂ ಕೇತನ್ ತಾಯಿ ಅನುಮತಿ ನೀಡಿರಲಿಲ್ಲ.
-
ಜೂನ್ 14: ಕೋಟೆಗೆ ತೆರಳಿದ್ದಾಗ ಕೇತನ್‌ನನ್ನು ತಳ್ಳಲು ಸಿಯಾ ಯತ್ನಿಸಿದ್ದಾಳು. ಆದರೆ ಅದೃಷ್ಟವಶಾತ್ ಕೇತನ್ ಪೊದೆಗಳನ್ನು ಹಿಡಿದು ಪ್ರಾಣಾಪಾಯದಿಂದ ಪಾರಾಗಿದ್ದ. ಆಗ ಕೇತನ್ “ಯಾಕೆ ತಳ್ಳಿದೆ?” ಎಂದು ಕೇಳಿದ್ದಕ್ಕೆ, “ಅಲ್ಲಿ ಹಾವು ಇತ್ತು, ನಿನ್ನನ್ನು ರಕ್ಷಿಸಲು ಹೋದೆ” ಎಂದು ಸಿಯಾ ಸುಳ್ಳು ಹೇಳಿ ನಂಬಿಸಿದ್ದಳು!
ಪಾಸ್ ಪೋರ್ಟ್ ಕಳ್ಳತನ!
ಇವರಿಬ್ಬರ ಪ್ರಿ-ವೆಡ್ಡಿಂಗ್ ಶೂಟ್‌ಗಾಗಿ ಬಾಲಿ ಪ್ರವಾಸದ ಪ್ಲಾನ್ ಕೂಡ ಇತ್ತು. ಆದರೆ ಪ್ರವಾಸ ರದ್ದಾಗಲಿ ಎಂಬ ಕಾರಣಕ್ಕೆ ಜೂನ್ 6 ರಂದು ಕೇತನ್ ಅವರ ಪಾಸ್‌ಪೋರ್ಟ್‌ನ್ನು ಸಿಯಾ ಕದ್ದು, ಮಹಿಳಾ ಶೌಚಾಲಯದಲ್ಲಿ ಬಿಸಾಡಿ ಬಂದಿದ್ದಳು.
ವಿಚಾರಣೆ ವೇಳೆ ಪೊಲೀಸರು, “ಮದುವೆ ಇಷ್ಟವಿಲ್ಲದಿದ್ದರೆ ನೇರವಾಗಿ ಹೇಳಿ ಮದುವೆ ಮುರಿದು ಓಡಿ ಹೋಗಬಹುದಿತ್ತಲ್ಲವೇ? ಕೊಲೆ ಏಕೆ ಮಾಡಿದ್ರಿ?” ಎಂದು ಪ್ರಶ್ನಿಸಿದಾಗ, “ನಿಶ್ಚಿತಾರ್ಥ ಮುರಿದರೆ ನನ್ನ ಕುಟುಂಬಕ್ಕೆ ಸಮಾಜದಲ್ಲಿ ಅವಮಾನವಾಗುತ್ತದೆ, ಅದಕ್ಕೆ ಈ ದಾರಿ ಹುಡುಕಿದೆವು” ಎಂದು ಆರೋಪಿಗಳು ಉತ್ತರಿಸಿರುವುದು ಪೊಲೀಸರನ್ನೇ ಬೆಚ್ಚಿಬೀಳಿಸಿದೆ.
ಸದ್ಯ ಪೊಲೀಸರು ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಇಬ್ಬರನ್ನೂ ಬಂಧಿಸಿದ್ದು, ಕೊಲೆ ಹಾಗೂ ಕ್ರಿಮಿನಲ್ ಸಂಚು ಪ್ರಕರಣ ದಾಖಲಿಸಿಕೊಂಡು ಕಠಿಣ ತನಿಖೆ ಮುಂದುವರಿಸಿದ್ದಾರೆ.






