ಚಿಕ್ಕಬಳ್ಳಾಪುರ: ತಾಲೂಕಿನ ಹಳೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡಿ ಹಳ್ಳಿಗಳಾದ ನಾಗರಬಾವಿಯಿಂದ ದೇವರಕೊಂಡಹಳ್ಳಿಗೆ ಸಂಪರ್ಕ ಕಲ್ಪಿಸುವ ಸುಮಾರು ₹3 ಕೋಟಿ ವೆಚ್ಚದ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಪ್ರದೀಪ್ ಈಶ್ವರ್ (MLA Pradeep Eshwar) ಅವರು ಗುದ್ದಲಿ ಪೂಜೆ ನೆರವೇರಿಸಿದ್ದಾರೆ.

ಬೆಳಂಬೆಳಗ್ಗೆಯೇ ಎರಡೂ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕರು, ಪ್ರತಿಯೊಬ್ಬರ ಮನೆ ಬಾಗಿಲಿಗೂ ತೆರಳಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು. ಈ ವೇಳೆ ಗ್ರಾಮಸ್ಥರು ಪಡಿತರ ಚೀಟಿ (Ration Card), ಪಿಂಚಣಿ ಸೌಲಭ್ಯ, ಕುಡಿಯುವ ನೀರಿನ ತೊಂದರೆ, ಆಟದ ಮೈದಾನ ಹಾಗೂ ಸರ್ಕಾರದ ವಸತಿ ಯೋಜನೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಶಾಸಕರ ಮುಂದೆ ಬಿಚ್ಚಿಟ್ಟರು. ಜನರ ಅಹವಾಲುಗಳನ್ನು ತಾಳ್ಮೆಯಿಂದ ಆಲಿಸಿದ ಪ್ರದೀಪ್ ಈಶ್ವರ್, ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿ ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದರು.
ಮನೆ ಬಾಗಿಲಿಗೇ ಬರಲಿದೆ ವಿಕಲಚೇತನರ ಪಿಂಚಣಿ!
ಗ್ರಾಮಸ್ಥರ ಅಹವಾಲು ಆಲಿಸುವಾಗ ವಿಕಲಚೇತನರು ಪಿಂಚಣಿ ಪಡೆಯಲು 7 ಕಿ.ಮೀ ದೂರದ ಹಳೇಹಳ್ಳಿ ಪೋಸ್ಟ್ ಆಫೀಸ್‌ಗೆ ಅಲೆಯುತ್ತಿರುವ ವಿಷಯ ಶಾಸಕರ ಗಮನಕ್ಕೆ ಬಂತು. ಇದಕ್ಕೆ ತಕ್ಷಣ ಸ್ಪಂದಿಸಿದ ಶಾಸಕರು, ಇನ್ಮುಂದೆ ವಿಕಲಚೇತನರ ಮನೆ ಬಾಗಿಲಿಗೇ ಪಿಂಚಣಿ ತಲುಪಿಸುವಂತೆ ಅಂಚೆ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
“ಕ್ಷೇತ್ರದ ಗಡಿ ಭಾಗದ ಹಳ್ಳಿಗಳ ಅಭಿವೃದ್ಧಿ ಹಾಗೂ ಮೂಲಸೌಕರ್ಯಗಳನ್ನು ಕಲ್ಪಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ನಾಗರಬಾವಿ ಹಾಗೂ ದೇವರಕೊಂಡಹಳ್ಳಿ ಗ್ರಾಮಗಳ ರಸ್ತೆ ಸಮಸ್ಯೆಗೆ ಶಾಶ್ವತ ಮುಕ್ತಿ ನೀಡಲು ರೂ.3 ಕೋಟಿ ವೆಚ್ಚದಲ್ಲಿ ಗುಣಮಟ್ಟದ ಸಿಸಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಸಾರ್ವಜನಿಕರು ಕಾಮಗಾರಿಯ ಗುಣಮಟ್ಟದ ಕಡೆಗೆ ಗಮನ ಹರಿಸಬೇಕು.” — ಪ್ರದೀಪ್ ಈಶ್ವರ್, ಶಾಸಕರು
ಗ್ರಾಮಸ್ಥರಿಗೆ ಸಿಗಲಿರುವ ಇತರೆ ಸೌಲಭ್ಯಗಳು:
-
ಶುದ್ಧ ಕುಡಿಯುವ ನೀರು: ದೇವಕೊಂಡಹಳ್ಳಿ ಮತ್ತು ನಾಗರಬಾವಿ ಎರಡೂ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಫಿಲ್ಟರ್ ಘಟಕ ಅಳವಡಿಸಲು ನಾಳೆಯಿಂದಲೇ ಕೆಲಸ ಆರಂಭವಾಗಲಿದೆ.
-
ಹೆಚ್ಚುವರಿ ರಸ್ತೆ ಮತ್ತು ಶಾಲೆ ದುರಸ್ತಿ: ದೇವನಕೊಂಡಹಳ್ಳಿಯಲ್ಲಿ ಹೆಚ್ಚುವರಿ 200 ಮೀಟರ್ ರಸ್ತೆ ನಿರ್ಮಾಣ ಹಾಗೂ ಶಾಲಾ ಕೊಠಡಿಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು.
-
ದರ್ಖಾಸ್ತು ಭೂಮಿ ಸಮಸ್ಯೆ: ದರ್ಖಾಸ್ತು ಭೂಮಿಗೆ ಸಂಬಂಧಿಸಿದಂತೆ ಸ್ಯಾಟಲೈಟ್ ಚಿತ್ರಣಗಳ ಡೇಟಾ ಸಂಗ್ರಹಿಸಲಾಗುತ್ತಿದ್ದು, ಜುಲೈ ಮೊದಲ ವಾರದಲ್ಲಿ ವಿಶೇಷ ಸಭೆ ಕರೆದು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.
ಮಂಚೇನಹಳ್ಳಿ ತಾಲ್ಲೂಕಿನ ಒಟ್ಟು 7 ಪಂಚಾಯಿತಿಗಳ ಪೈಕಿ ಹಳೇಹಳ್ಳಿ ಮತ್ತು ಜರಬಂಡಹಳ್ಳಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿದ್ದು, ಇವು ಮುಗಿದರೆ ಇಡೀ ತಾಲ್ಲೂಕಿನ ಪ್ರಮುಖ ಬೇಡಿಕೆಗಳು ಈಡೇರಿದಂತಾಗುತ್ತದೆ ಎಂದು ಶಾಸಕರು ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯ ಪಂಚಾಯಿತಿ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಕಾಂಗ್ರೆಸ್ ಮುಖಂಡರಾದ ನಾಗೇಶ್ ರೆಡ್ಡಿ, ವಿನಯ್ ಬಂಗಾರಿ, ನಾಗಭೂಷಣ್, ಉಮೇಶ್, ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







