Bengaluru traffic:- ಬೆಂಗಳೂರು ಟ್ರಾಫಿಕ್‌ಗೆ ಬಲಿಯಾಯಿತಾ UPSC ಕನಸು? ಒಂದು ನಿಮಿಷ ತಡವಾಗಿದ್ದಕ್ಕೆ ಪರೀಕ್ಷೆಯಿಂದ ವಂಚಿತನಾದ ವೈಟ್‌ಫೀಲ್ಡ್ ವಿದ್ಯಾರ್ಥಿ!

ವರ್ಷಗಟ್ಟಲೆ ಹಗಲಿರುಳು ಕುಳಿತು ಮಾಡಿದ ಕಠಿಣ ಪರಿಶ್ರಮ, ಐಎಎಸ್-ಐಪಿಎಸ್ ಆಗಬೇಕೆಂಬ ಹೆತ್ತವರ ನೂರಾರು ಕನಸುಗಳು… ಎಲ್ಲವೂ ಕೇವಲ ‘ಒಂದು ನಿಮಿಷ’ದಲ್ಲಿ ಧೂಳೀಪಟವಾಗಿ ಹೋದರೆ ಆ ಅಭ್ಯರ್ಥಿಯ ಪರಿಸ್ಥಿತಿ ಏನಾಗಬೇಡ? ಇಂತಹದ್ದೊಂದು ಅತ್ಯಂತ ಬೇಸರದ ಮತ್ತು ದುರದೃಷ್ಟಕರ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾನುವಾರ (ಮೇ 24) ನಡೆದಿದೆ.

ಬೆಂಗಳೂರಿನ ರಸ್ತೆಗಳ ದುರಾವಸ್ಥೆ ಹಾಗೂ ಟ್ರಾಫಿಕ್ ಜಿಲಾಜಾಹತ್‌ಗೆ (Bengaluru traffic & patholes) ಸಿಲುಕಿ ವಿದ್ಯಾರ್ಥಿಯೊಬ್ಬ ಯುಪಿಎಸ್‌ಸಿ (UPSC) ಪೂರ್ವಭಾವಿ ಪರೀಕ್ಷೆಯಿಂದ ವಂಚಿತನಾಗಿರುವ ಗಂಭೀರ ಆರೋಪ ಕೇಳಿಬಂದಿದೆ.

ಮುಂಜಾನೆ 7 ಗಂಟೆಗೆ ಹೊರಟರೂ ಸಿಗದ ಪ್ರವೇಶ!

ವೈಟ್‌ಫೀಲ್ಡ್ ನಿವಾಸಿಯಾದ ಪ್ರಮೋದ್ ಎಂಬ ವಿದ್ಯಾರ್ಥಿ ಭಾನುವಾರ ನಡೆದ ಯುಪಿಎಸ್‌ಸಿ ಪ್ರಿಲಿಮ್ಸ್ ಪರೀಕ್ಷೆಗಾಗಿ ಚಾಲುಕ್ಯ ಸರ್ಕಲ್ ಬಳಿ ಇರುವ ಆರ್. ಸಿ. ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಬರಬೇಕಿತ್ತು. ಪರೀಕ್ಷಾ ನಿಯಮಗಳ ಪ್ರಕಾರ ಬೆಳಿಗ್ಗೆ 9:00 ಗಂಟೆಗೆ ಗೇಟ್ ಕ್ಲೋಸ್ ಆಗುತ್ತದೆ ಎಂದು ತಿಳಿದಿದ್ದ ಪ್ರಮೋದ್, ಮುಂಜಾನೆ 7:00 ಗಂಟೆಗೇ ಮನೆಯಿಂದ ಹೊರಟಿದ್ದರು.

ಆದರೆ ವೈಟ್‌ಫೀಲ್ಡ್ ಮತ್ತು ಮಹಾದೇವಪುರ ಭಾಗದ ರಸ್ತೆಗಳು ಸಂಪೂರ್ಣ ಹದಗೆಟ್ಟಿರುವುದರಿಂದ ಆಟೋ ಚಾಲಕರು ಬರಲು ನಿರಾಕರಿಸಿದ್ದಾರೆ. ಮೆಜೆಸ್ಟಿಕ್ ತಲುಪಿ ಅಲ್ಲಿಂದ ಆಟೋ ಹಿಡಿದು ಪರೀಕ್ಷಾ ಕೇಂದ್ರಕ್ಕೆ ಬರುವಷ್ಟರಲ್ಲಿ ಕಾಲ ಮೀರಿಹೋಗಿತ್ತು. ಪ್ರಮೋದ್ ಕೇಂದ್ರದ ಮುಂದೆ ನಿಂತಾಗ ಸರಿಯಾಗಿ 9:01 ಆಗಿತ್ತು ಎನ್ನಲಾಗಿದೆ. ಕೇವಲ ಒಂದು ನಿಮಿಷ ತಡವಾಗಿದ್ದರಿಂದ ನಿಯಮಗಳ ಪ್ರಕಾರ ಅಧಿಕಾರಿಗಳು ಗೇಟ್ ತೆರೆಯಲು ನಿರಾಕರಿಸಿದ್ದಾರೆ.

ಅಧಿಕಾರಿಗಳ ಮುಂದೆ ಕಣ್ಣೀರಿಟ್ಟ ವಿದ್ಯಾರ್ಥಿ

“ನಮ್ಮ ಬೆಂಗಳೂರಿನ ರಸ್ತೆಗಳ ಪರಿಸ್ಥಿತಿ ನಿಮಗೇ ಗೊತ್ತಿದೆ. ನಾನು ಬೆಳಿಗ್ಗೆ 7 ಗಂಟೆಗೆ ಹೊರಟರೂ ಇಲ್ಲಿಗೆ ತಲುಪಲು ಸಾಧ್ಯವಾಗಿಲ್ಲ, ದಯವಿಟ್ಟು ನನ್ನ ವರ್ಷದ ಶ್ರಮವನ್ನು ಅರ್ಥಮಾಡಿಕೊಳ್ಳಿ” ಎಂದು ಪ್ರಮೋದ್ ಪರೀಕ್ಷಾ ಮೇಲ್ವಿಚಾರಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಆದರೆ ಯುಪಿಎಸ್‌ಸಿಯ ಕಟ್ಟುನಿಟ್ಟಾದ ಸ್ಕ್ರೀನಿಂಗ್ ಮತ್ತು ಗೇಟ್ ಕ್ಲೋಸಿಂಗ್ ನಿಯಮಗಳ ಹಿನ್ನೆಲೆಯಲ್ಲಿ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿ, ಪ್ರವೇಶ ನಿರಾಕರಿಸಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಯ ಇಡೀ ವರ್ಷದ ಕಠಿಣ ಶ್ರಮ “ನೀರಲ್ಲಿ ಹೋಮ ಮಾಡಿದಂತಾಗಿದೆ”.

ಒಬ್ಬರಲ್ಲ, ಆರು ವಿದ್ಯಾರ್ಥಿಗಳ ಕಥೆಯೂ ಇದೇ!

ಕೇವಲ ಪ್ರಮೋದ್ ಮಾತ್ರವಲ್ಲದೆ, ಇದೇ ಪರೀಕ್ಷಾ ಕೇಂದ್ರಕ್ಕೆ ಸರಿಯಾದ ಸಮಯಕ್ಕೆ ಬರಲಾಗದ ಒಟ್ಟು 6 ವಿದ್ಯಾರ್ಥಿಗಳು ಇಂದು ಯುಪಿಎಸ್‌ಸಿ ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ಬೆಂಗಳೂರಿನ ರಸ್ತೆಗುಂಡಿಗಳು ಮತ್ತು ಟ್ರಾಫಿಕ್ ಸಮಸ್ಯೆ ವಿದ್ಯಾರ್ಥಿಗಳ ಭವಿಷ್ಯದ ಆಟವಾಡುತ್ತಿದೆಯೇ ಎಂಬ ಸಾರ್ವಜನಿಕರ ಆಕ್ರೋಶಕ್ಕೆ ಇದು ಮತ್ತೊಮ್ಮೆ ಕಾರಣವಾಗಿದೆ. ಭದ್ರತೆಯ ದೃಷ್ಟಿಯಿಂದ ಹಾಗೂ ಯಾವುದೇ ಅವ್ಯವಹಾರಕ್ಕೆ ಆಸ್ಪದ ನೀಡದಂತೆ ದೇಶಾದ್ಯಂತ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಲಾಗುತ್ತದೆಯಾದರೂ, ನಗರದ ಮೂಲಸೌಕರ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಬೆಲೆ ತೆರಬೇಕಾಗಿ ಬಂದಿರುವುದು ದುರಂತ.

ರಾಜ್ಯದ ಬೆಂಗಳೂರು, ಮೈಸೂರು ಹಾಗೂ ಧಾರವಾಡದ ವಿವಿಧ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಭದ್ರತೆಯ ನಡುವೆ ಈ ಬಾರಿ ಯುಪಿಎಸ್‌ಸಿ ಪ್ರಿಲಿಮ್ಸ್ ಪರೀಕ್ಷೆ ನಡೆದಿದೆ. ಆದರೆ, ಬೆಂಗಳೂರಿನ ರಸ್ತೆಗಳ ಹೊಂಡ-ಗುಂಡಿಗಳಿಗೆ ವಿದ್ಯಾರ್ಥಿಯ ಕನಸು ಬಲಿಯಾಗಿರುವ ಈ ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles