(Bagalkot) ಬಾಗಲಕೋಟೆಯಲ್ಲಿ ಶಾಲೆಯ ಮೇಲ್ಛಾವಣಿ ಕುಸಿದು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆಗೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್. ಅಶೋಕ್ ಅವರು ಕಾಂಗ್ರೆಸ್ ಪಕ್ಷ ಹಾಗೂ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ದೇಶಕ್ಕೆ ‘ನ್ಯಾಯ’ದ ಪಾಠ ಮಾಡುವ ಕಾಂಗ್ರೆಸ್‌ಗೆ ರಾಜ್ಯದಲ್ಲಿ ಮಕ್ಕಳಿಗೊಂದು ಸುರಕ್ಷಿತ ತರಗತಿಯನ್ನು ಖಾತರಿಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಬಾಗಲಕೋಟೆ ತಾಲೂಕಿನ ಮುಗಳೊಳ್ಳಿ ತಾಂಡಾದ ಸರ್ಕಾರಿ ಶಾಲೆಯಲ್ಲಿ ತರಗತಿಗಳು ನಡೆಯುತ್ತಿದ್ದ ವೇಳೆ ಅನಿರೀಕ್ಷಿತವಾಗಿ ಶಾಲೆಯ ಮೇಲ್ಛಾವಣಿ ಕುಸಿದುಬಿದ್ದ ಪರಿಣಾಮ ಕೆಲ ಮಕ್ಕಳಿಗೆ ಗಾಯಗಳಾಗಿರುವ ಘಟನೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣವಾದ ‘ಎಕ್ಸ್’ ಮೂಲಕ ರಾಜ್ಯ ಸರ್ಕಾರದ ಆಡಳಿತ ವೈಖರಿಯನ್ನು ಆರ್. ಅಶೋಕ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

‘ಛಾತ್ರೋಂ ಕಿ ಗೂಂಜ್’ ಸವಾಲು
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿರುವ ಅಶೋಕ್, “ಕರ್ನಾಟಕದ ಈ ಖಟಾಖಟ್ ರೂಫ್ ಶಾಲೆಯಲ್ಲಿ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮ ನಡೆಸುವ ಬಗ್ಗೆ ಏನು ಹೇಳುತ್ತೀರಿ?” ಎಂದು ಪ್ರಶ್ನಿಸಿದ್ದಾರೆ. ನೀವು ಕೇವಲ ನ್ಯಾಯದ ಭಾಷಣಗಳನ್ನು ಮಾಡಿದ್ದೀರಿ, ಗ್ಯಾರಂಟಿಗಳನ್ನು ಮಾರಾಟ ಮಾಡಿದ್ದೀರಿ ಹಾಗೂ ‘ಖಟಾಖಟ್’ ಎಂದು ಕೂಗಿದ್ದೀರಿ. ಆದರೆ ಈಗ ಬಂದು ವಿದ್ಯಾರ್ಥಿಗಳ ಅಳಲನ್ನು ಕೇಳಿ ಎಂದು ಸವಾಲುಹಾಕಿದ್ದಾರೆ.
ಮಕ್ಕಳ ಸುರಕ್ಷತೆಯಲ್ಲಿ ಸರ್ಕಾರದ ವೈಫಲ್ಯ
ಇದು ಯಾವುದೋ ಮೂರನೇ ಜಗತ್ತಿನ ದೇಶದ ಮರೆತುಹೋದ ಮೂಲೆಯಲ್ಲ, ಬದಲಿಗೆ ಕಾಂಗ್ರೆಸ್ ಆಡಳಿತವಿರುವ ಕರ್ನಾಟಕ. ಇಲ್ಲಿ ಗ್ಯಾರಂಟಿಗಳ ಬಗ್ಗೆ ಮಾತನಾಡುವ ಸರ್ಕಾರಕ್ಕೆ ಕನಿಷ್ಠ ಮಕ್ಕಳ ತಲೆಯ ಮೇಲಿನ ಶಾಲೆಯ ಮೇಲ್ಛಾವಣಿಯ ಸುರಕ್ಷತೆಯನ್ನು ಖಾತ್ರಿಪಡಿಸಲು ಆಗುತ್ತಿಲ್ಲ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ವೇದಿಕೆ ಭಾಷಣಗಳು ಹಾಗೂ ಸಿದ್ಧಪಡಿಸಿದ ಪ್ರವಚನಗಳನ್ನು ಬದಿಗಿಟ್ಟು ಕರ್ನಾಟಕಕ್ಕೆ ಬನ್ನಿ, ಈ ಶಾಲೆಯಲ್ಲಿ ನಿಂತು ಮಕ್ಕಳ ಸಂಕಷ್ಟವನ್ನು ಕಣ್ಣಾರೆ ನೋಡಿ ಎಂದು ರಾಹುಲ್ ಗಾಂಧಿಯವರಿಗೆ ಆಗ್ರಹಿಸಿರುವ ಅವರು, “ಖಟಾಖಟ್, ಮೇಲ್ಛಾವಣಿ ಕುಸಿದುಬಿದ್ದಿದೆ. ಈಗ ಘೋಷಣೆಗಳಿಗಿಂತ ಮಿಗಿಲಾಗಿ ‘ಛಾತ್ರೋಂ ಕಿ ಗೂಂಜ್’ ಮೊಳಗಲಿ ಮತ್ತು ಇಡೀ ದೇಶ ಅದನ್ನು ಕೇಳಲಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.





