ಪಂಚಾಯಿತಿಯಿಂದ ಸಂಸತ್ತಿನವರೆಗೆ ಆಡಳಿತ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಹೊಸ ನಾಯಕತ್ವದ ಅನಿವಾರ್ಯತೆ ಇದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (CM DK Shivakumar) ಅಭಿಪ್ರಾಯಪಟ್ಟಿದ್ದಾರೆ. ಅದರಲ್ಲೂ ಪ್ರಮುಖವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯ ಮತ್ತು ಆಡಳಿತಾತ್ಮಕ ನಾಯಕತ್ವವನ್ನು ವಹಿಸಿಕೊಳ್ಳಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಮಾಜಿ ಸಚಿವರು ಹಾಗೂ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್. ಸಿಂಧ್ಯಾ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ಸಿಎಂ ಈ ಮಹತ್ವದ ಮಾತುಗಳನ್ನಾಡಿದ್ದಾರೆ. ಈ ವೇಳೆ ತಮ್ಮ ರಾಜಕೀಯ ಜೀವನದ ಆರಂಭಿಕ ದಿನಗಳನ್ನು ಸ್ಮರಿಸಿಕೊಂಡ ಸಿಂಧ್ಯಾ ಅವರು, ತಾವೂ ಕೂಡ ರಾಜಾಜಿನಗರದ ವಿದ್ಯಾವರ್ಧಕ ಶಾಲೆಯಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದೆವು ಎಂಬುದನ್ನು ಹಂಚಿಕೊಂಡರು.

ಭೇಟಿಯ ಪ್ರಮುಖ ಬೇಡಿಕೆಗಳು ಮತ್ತು ಚರ್ಚೆಗಳು:
-
ಮೀಸಲಾತಿ ವಿಸ್ತರಣೆ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ವತಿಯಿಂದ ನಡೆಯುವ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಸೀಟುಗಳಲ್ಲಿ ಮೀಸಲಾತಿಯನ್ನು ಹೆಚ್ಚಿಸಬೇಕು ಎಂದು ಸಿಂಧ್ಯಾ ಮನವಿ ಮಾಡಿದರು.
-
ಪಿಂಚಣಿ ಹಾಗೂ ಸೌಲಭ್ಯ: ನಿವೃತ್ತ ನೌಕರರಿಗೆ ಬಾಕಿ ಇರುವ ಪಿಂಚಣಿಯನ್ನು ಕೂಡಲೇ ಬಿಡುಗಡೆ ಮಾಡುವಂತೆ ಕೋರಲಾಯಿತು.
-
ಜಿಲ್ಲಾ ಕೇಂದ್ರಗಳ ಅಭಿವೃದ್ಧಿ: ಧಾರವಾಡ ಮತ್ತು ವಿಜಯಪುರದಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಯ ಜಾಗದ ಗುತ್ತಿಗೆ ಅವಧಿ ಮುಗಿದಿದ್ದು, ಅದನ್ನು ಮುಂದುವರೆಸಿಕೊಡಲು ಹಾಗೂ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಲು ಮನವಿ ಮಾಡಿಕೊಳ್ಳಲಾಯಿತು.
ಮನವಿಗೆ ಸಕಾರಕಾರಿಯಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು, ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ವಿವೇಚನಾ ಅಧಿಕಾರದಡಿ ಕೂಡಲೇ ಅನುದಾನ ಬಿಡುಗಡೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.






