Chikkaballapur Crime news:- ಚಿಕ್ಕಬಳ್ಳಾಪುರದ ಕಂದವಾರ ಬಾಗಿಲು ಮನೆಯಲ್ಲಿ ವಿವಾಹಿತೆ ಪುಷ್ಪಲತಾ ಅನುಮಾನಾಸ್ಪದ ಸಾವು; ಸುಪಾರಿ ಕೊಲೆ ಎಂದು ಪೋಷಕರ ಗಂಭೀರ ಆರೋಪ..!

(Chikkaballapur Crime news) ಚಿಕ್ಕಬಳ್ಳಾಪುರ: ನಗರದ ಕಂದವಾರ ಬಾಗಿಲಿನ ವಾರ್ಡ್ ನಂಬರ್ 13ರ ಬಾಪೂಜಿ ನಗರದಲ್ಲಿ 25 ವರ್ಷದ ವಿವಾಹಿತೆ ಪುಷ್ಪಲತಾ ಎಂಬುವವರು ತಮ್ಮ ಮನೆಯಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಗುರುವಾರ ಮಧ್ಯರಾತ್ರಿ ನಡೆದಿದೆ.ಇದು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಡೆದ ‘ಸುಪಾರಿ ಕೊಲೆ’ ಎಂದು ಮೃತಳ ಪೋಷಕರು ಗಂಭೀರವಾಗಿ ಆರೋಪಿಸಿದ್ದಾರೆ.

ಘಟನೆಯ ವಿವರ: ಬೆಂಗಳೂರಿನ ಚುಂಚಘಟ್ಟ ಮೂಲದ ಪುಷ್ಪಲತಾ ರವರನ್ನು ಚಿಕ್ಕಬಳ್ಳಾಪುರದ ಮೂರ್ತಿ (ಮೇಸ್ತ್ರಿ) ಹಾಗೂ ವಿಜಯಲಕ್ಷ್ಮಿ ದಂಪತಿಯ ಮಗ ಭರತ್ ಎಂಬುವವರಿಗೆ ಕೊಟ್ಟು 2020 ರಲ್ಲಿ ಅದ್ದೂರಿಯಾಗಿ ವಿವಾಹ ಮಾಡಿಕೊಡಲಾಗಿತ್ತು. ಇವರಿಗೆ 4 ವರ್ಷದ ಹೆಣ್ಣು ಮಗಳಿದ್ದಾಳೆ. ಮದುವೆಯಾದಾಗಿನಿಂದಲೂ ದಂಪತಿ ಹಾಗೂ ಅತ್ತೆ-ಮಾವಂದಿರ ನಡುವೆ ಕೌಟುಂಬಿಕ ಕಲಹ ನಡೆಯುತ್ತಿತ್ತು ಎನ್ನಲಾಗಿದೆ.

ದಿನಾಂಕ 28-05-2026 ರಂದು ಬೆಳಿಗ್ಗೆ ಭರತ್ ಮತ್ತು ಆತನ ಪೋಷಕರು ದೇವಸ್ಥಾನದ ಪ್ರವಾಸಕ್ಕೆ ತೆರಳಿದ್ದರು. ಮನೆಯಲ್ಲಿ ಪುಷ್ಪಲತಾ, ಆಕೆಯ 4 ವರ್ಷದ ಮಗಳು, ನಾದಿನಿ ಭವ್ಯ ಹಾಗೂ ಅಜ್ಜಿ ನಾಗಮ್ಮ ಮಾತ್ರ ಇದ್ದರು. ಗುರುವಾರ ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಮನೆಯಲ್ಲಿ ಮಲಗಿದ್ದ ಪುಷ್ಪಲತಾ ಅವರ ಕತ್ತಿನ ಭಾಗವನ್ನು ಶಾರ್ಪ್ ಆದ ವಸ್ತುವಿನಿಂದ (ಚಾಕು) ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ.

ಪೋಷಕರ ಆರೋಪ – ‘ಸುಪಾರಿ ಕೊಲೆ’: ಮೃತಳ ಪೋಷಕರು ಮತ್ತು ಬಂಧುಗಳು ಇದು ಕಳ್ಳತನಕ್ಕಾಗಿ ನಡೆದ ಕೊಲೆಯಲ್ಲ, ಇದೊಂದು ವ್ಯವಸ್ಥಿತ ‘ಸುಪಾರಿ ಕೊಲೆ’ ಎಂದು ಆರೋಪಿಸಿದ್ದಾರೆ. “ಭರತ್‌ನ ಅನೈತಿಕ ಸಂಬಂಧ ಹಾಗೂ ಕುಟುಂಬದ ಕಿರುಕುಳವೇ ಇದಕ್ಕೆ ಕಾರಣ. ಎಲ್ಲರೂ ಪ್ಲಾನ್ ಮಾಡಿಯೇ ಪ್ರವಾಸದ ನೆಪದಲ್ಲಿ ಹೊರಗೆ ಹೋಗಿದ್ದಾರೆ. ಮನೆಯ ಸಿಸಿಟಿವಿ ಕ್ಯಾಮೆರಾವನ್ನು ಸರಿಯಾಗಿ ಏಳು ಗಂಟೆಗೆ ಆಫ್ ಮಾಡಲಾಗಿದೆ” ಎಂದು ಮೃತಳ ಸೋದರ ಮತ್ತು ಪೋಷಕರು ಕಣ್ಣೀರು ಹಾಕುತ್ತಾ ಅನುಮಾನ ವ್ಯಕ್ತಪಡಿಸಿದ್ದಾರೆ.

ಅತ್ತೆ ಮತ್ತು ಅಜ್ಜಿಯ ಹೇಳಿಕೆ: ಮತ್ತೊಂದೆಡೆ ಮೃತಳ ಅತ್ತೆ ವಿಜಯಲಕ್ಷ್ಮಿ ಹಾಗೂ ಅಜ್ಜಿ ನಾಗಮ್ಮ ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ. “ನಾವು ಕೇರಳದ ದೇವಸ್ಥಾನಕ್ಕೆ ಹೋಗಿದ್ದೆವು. ರಾತ್ರಿ ಕಳ್ಳರು ನುಗ್ಗಿ ನಾದಿನಿ ಭವ್ಯಳ ಬಾಯಿಗೆ ಬಟ್ಟೆ ತುರುಕಿ, ಪೆಪ್ಪರ್ ಸ್ಪ್ರೇ ಸಿಂಪಡಿಸಿ ಪ್ರಜ್ಞೆ ತಪ್ಪಿಸಿದ್ದಾರೆ. ನಂತರ ಪುಷ್ಪಲತಾ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ದೋಚಲು ಹೋಗಿ ಈ ಕೃತ್ಯ ಎಸಗಿದ್ದಾರೆ” ಎಂದು ಅವರು ಹೇಳಿಕೆ ನೀಡಿದ್ದಾರೆ. ಪ್ರಸ್ತುತ ನಾದಿನಿ ಭವ್ಯ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪೊಲೀಸ್ ತನಿಖೆ: ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದರೋಡೆಗಾಗಿ ನಡೆದ ಕೊಲೆಯೇ ಅಥವಾ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಡೆದ ಸುಪಾರಿ ಕೊಲೆಯೇ ಎಂಬ ವಿವಿಧ ಆಯಾಮಗಳಲ್ಲಿ ತೀವ್ರ ತನಿಖೆ ಕೈಗೊಂಡಿದ್ದಾರೆ

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles