ಚಿಕ್ಕಬಳ್ಳಾಪುರ: “ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ದಶಕಗಳ ನೀರಿನ ಬವಣೆಯನ್ನು ನೀಗಿಸಲು ಹೊಸ ಮುಖ್ಯಮಂತ್ರಿಗಳು ತಕ್ಷಣವೇ ಕ್ರಮ ಕೈಗೊಳ್ಳಬೇಕು. ನೀರು, ನೆಲ ಮತ್ತು ಜನರ ಹಿತಾಸಕ್ತಿಯ ವಿಷಯದಲ್ಲಿ ನಾವು ಎಂದಿಗೂ ರಾಜಕಾರಣ ಮಾಡುವುದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ತೆಗೆದುಕೊಳ್ಳುವ ಸಕಾರಾತ್ಮಕ ನಿರ್ಧಾರಗಳಿಗೆ ನಮ್ಮ ಸಂಪೂರ್ಣ ಸಹಕಾರ ಇರಲಿದೆ” ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Former CM Basavaraj Bommai) ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ನಡೆದ ಕಾರ್ಯನಿರತ ಪತ್ರಕರ್ತರ ಸಂಘದ “ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ದಿಕ್ಸೂಚಿ ಭಾಷಣ ಮಾಡಿದರು.
ಒಂದು ಕಾಲದ ‘ಬೆಂಗಳೂರಿನ ಅನ್ನದಾತ’ ಇಂದು ನೀರಿಲ್ಲದೆ ಬೆಂದು ಹೋಗಿದೆ!
ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಮಣ್ಣಿನ ಗುಣ ಹಾಗೂ ರೈತರ ಶ್ರಮವನ್ನು ಶ್ಲಾಘಿಸಿದ ಬೊಮ್ಮಾಯಿ, “ಇಲ್ಲಿನ ಮಣ್ಣು ಅತ್ಯಂತ ಶ್ರೇಷ್ಠವಾದದ್ದು. ರೈತನ ಬೆವರಿನ ಹನಿ ಭೂಮಿಗೆ ಬಿದ್ದರೆ ಸಾಕು, ಇಲ್ಲಿನ ಭೂಮಿ ತಾಯಿ ಬಂಗಾರದಂತಹ ಬೆಳೆ ನೀಡುತ್ತಾಳೆ. ಒಂದು ಕಾಲದಲ್ಲಿ ಇಡೀ ಬೆಂಗಳೂರು ಮಹಾನಗರಕ್ಕೆ ತರಕಾರಿ, ಹಣ್ಣು ಮತ್ತು ರೇಷ್ಮೆಯನ್ನು ಪೂರೈಸುತ್ತಿದ್ದದ್ದೇ ಈ ಎರಡು ಜಿಲ್ಲೆಗಳು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಇಲ್ಲಿ ಹರಿಯುತ್ತಿದ್ದ ಐದು ನದಿಗಳೂ ಸಂಪೂರ್ಣವಾಗಿ ಬತ್ತಿ ಹೋಗಿವೆ. ಪಶ್ಚಿಮ ಘಟ್ಟಗಳಿಂದ ಹರಿದು ಬರುತ್ತಿದ್ದ ಜೀವಸೆಲೆ ನಿಂತು ಹೋಗಲು, ಅಲ್ಲಿನ ನೀರಿನ ಮೂಲಗಳನ್ನು ಸಂರಕ್ಷಿಸುವಲ್ಲಿ ನಾವು ತೋರಿದ ಉದಾಸೀನತೆಯೇ ಕಾರಣ” ಎಂದು ವಿಷಾದಿಸಿದರು.

ಎತ್ತಿನಹೊಳೆ ಯೋಜನೆ: ಪೈಪ್ಲೈನ್ ತಂತ್ರಜ್ಞಾನ ಕೈಬಿಟ್ಟಿದ್ದೇ ಹಿನ್ನಡೆಗೆ ಕಾರಣ
ತಮ್ಮ ನೀರಾವರಿ ಸಚಿವರಾಗಿದ್ದ ಅವಧಿಯನ್ನು ನೆನಪಿಸಿಕೊಂಡ ಬೊಮ್ಮಾಯಿ, ಎತ್ತಿನಹೊಳೆ ಯೋಜನೆಯ ಆರಂಭದ ದಿನಗಳ ಹಿಂದಿನ ಸತ್ಯಗಳನ್ನು ಹಂಚಿಕೊಂಡರು:
-
ಫ್ಲೋರೈಡ್ ಮುಕ್ತ ನೀರಿಗಾಗಿ ಯೋಜನೆ: ಕೋಲಾರದ ಪತ್ರಕರ್ತರು ಇಲ್ಲಿನ ಫ್ಲೋರೈಡ್ ಯುಕ್ತ ಕುಡಿಯುವ ನೀರಿನ ಸಮಸ್ಯೆಯನ್ನು ಬಂದು ನೋಡುವಂತೆ ವಿನಂತಿಸಿದಾಗ, ನಾನು ಖುದ್ದಾಗಿ ಭೇಟಿ ನೀಡಿ ತಾಂತ್ರಿಕ ತಜ್ಞರೊಂದಿಗೆ ಚರ್ಚಿಸಿದೆ. ಯಾವುದೇ ಅಂತಾರಾಜ್ಯ ಜಲವಿವಾದ ಬಾರದಂತೆ ಎತ್ತಿನಹೊಳೆ ಯೋಜನೆಯನ್ನು ರೂಪಿಸಿದೆ.
-
ಅರಣ್ಯ ನಾಶಕ್ಕೆ ಬ್ರೇಕ್: ಇದಕ್ಕೂ ಮುನ್ನ ಪ್ರಸ್ತಾಪದಲ್ಲಿದ್ದ ‘ನೇತ್ರಾವತಿ ತಿರುವು ಯೋಜನೆ’ಯಿಂದ ಸುಮಾರು 11 ಸಾವಿರ ಹೆಕ್ಟೇರ್ ದಟ್ಟ ಅರಣ್ಯ ನಾಶವಾಗುತ್ತಿತ್ತು. ಹಾಗಾಗಿ, ಅದಕ್ಕೆ ಪರ್ಯಾಯವಾಗಿ ಎತ್ತಿನಹೊಳೆ ಯೋಜನೆಯನ್ನು ತರಲಾಯಿತು.
-
ವಿಳಂಬಕ್ಕೆ ಕಾರಣವಾದ ಅಪಪ್ರಚಾರ: “ನನ್ನ ಮೂಲ ಉದ್ದೇಶದಂತೆ ಪೈಪ್ಲೈನ್ ಮೂಲಕ ನೀರು ತಂದಿದ್ದರೆ, ಇಷ್ಟೊತ್ತಿಗಾಗಲೇ ಎರಡೂ ಜಿಲ್ಲೆಗಳಿಗೆ 10 ಟಿಎಂಸಿ ನೀರು ಸಿಗುತ್ತಿತ್ತು. ಆದರೆ, ತಾಂತ್ರಿಕ ಜ್ಞಾನವಿಲ್ಲದ ಕೆಲವರು ‘ಅಲ್ಲಿ ನೀರೇ ಇಲ್ಲ’ ಎಂಬ ತಪ್ಪು ಅಭಿಪ್ರಾಯ ಸೃಷ್ಟಿಸಿ ಎರಡು ಅಮೂಲ್ಯ ವರ್ಷಗಳನ್ನು ವ್ಯರ್ಥ ಮಾಡಿದರು. ಆ ನಂತರ ಕಾಲುವೆ ಮೂಲಕ ನೀರು ತರುವ ಪ್ರಯತ್ನ ಆರಂಭವಾಯಿತು. ಈಗಿನ ಹೊಸ ಮುಖ್ಯಮಂತ್ರಿಗಳು ಈ ಹಿಂದೆ ನೀರಾವರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ನಾವು ಸಿದ್ಧಪಡಿಸಿದ್ದ ಎತ್ತಿನಹೊಳೆ ಲಿಫ್ಟ್ ಯೋಜನೆಗೆ ಅವರು ಬಟನ್ ಒತ್ತುವ ಮೂಲಕ ಚಾಲನೆ ನೀಡಿದ್ದಾರೆ” ಎಂದರು.
“ಅಂತಾರಾಜ್ಯ ಜಲ ಕಾಯ್ದೆ ಸಂಪೂರ್ಣ ಬದಲಾಗಬೇಕು”
“ಯಾವುದೇ ನೀರಾವರಿ ಯೋಜನೆಯನ್ನು ಕಾಲಮಿತಿಯಲ್ಲಿ ಮುಗಿಸದಿದ್ದರೆ, ಅದರ ವೆಚ್ಚ 1,000 ಕೋಟಿಯಿಂದ ಹತ್ತು ಪಟ್ಟು ಹೆಚ್ಚಾಗುತ್ತದೆ. ದೇಶದಲ್ಲಿ ಒಂದು ಅಂತಾರಾಜ್ಯ ಜಲವಿವಾದ ಬಗೆಹರಿಯಲು 50 ವರ್ಷಗಳೇ ಕಳೆಯುತ್ತಿವೆ. ಈ ಕಾರಣಕ್ಕಾಗಿಯೇ ನಾನು ಸಂಸತ್ತಿನಲ್ಲಿ ‘ಅಂತಾರಾಜ್ಯ ಜಲವಿವಾದ ಕಾಯ್ದೆ’ಯನ್ನು ಸಂಪೂರ್ಣವಾಗಿ ಬದಲಾಯಿಸಬೇಕು ಮತ್ತು ನದಿಗಳ ಸಮಗ್ರ ಅಭಿವೃದ್ಧಿಗೆ ಹೊಸ ಕಾನೂನು ತರಬೇಕು ಎಂದು ಒತ್ತಾಯಿಸಿದ್ದೇನೆ. ಪ್ರಧಾನಮಂತ್ರಿಯವರೂ ಸಹ ನ್ಯಾಯಮಂಡಳಿಗಳಲ್ಲಿ ವರ್ಷಗಟ್ಟಲೆ ಧೂಳು ತಿನ್ನುತ್ತಿರುವ ಪ್ರಕರಣಗಳಿಗೆ ಮುಕ್ತಿ ಹಾಡಲು ಕಾನೂನು ತಿದ್ದುಪಡಿಗೆ ಉತ್ಸುಕರಾಗಿದ್ದಾರೆ” ಎಂದು ಬೊಮ್ಮಾಯಿ ಆಶಾವಾದ ವ್ಯಕ್ತಪಡಿಸಿದರು.

ಪತ್ರಕರ್ತರು ಕೇವಲ ನಗರದ ಸುದ್ದಿಗೆ ಸೀಮಿತವಾಗದಿರಲಿ
ಪತ್ರಕರ್ತರ ಜವಾಬ್ದಾರಿಯನ್ನು ನೆನಪಿಸಿದ ಮಾಜಿ ಸಿಎಂ, “ಇಡ್ಲಿ-ದೋಸೆಯಂತಹ ಕ್ಷುಲ್ಲಕ ವಿಷಯಗಳಿಗಿಂತ, ಪ್ರತಿಯೊಬ್ಬರ ಮನೆಗೆ ಅನ್ನ ಕೊಡುವಂತಹ ಬದುಕಿನ ಜವಾಬ್ದಾರಿಯುತ ವಿಷಯಗಳಿಗೆ ಮಾಧ್ಯಮಗಳು ಧ್ವನಿಯಾಗಬೇಕು. ನಾನು ಮುಖ್ಯಮಂತ್ರಿಯಾಗಿದ್ದಾಗ ಸ್ಥಳೀಯ ಪತ್ರಿಕೆಗಳಿಗೆ ಹಾಗೂ ಹಿಂದುಳಿದ ವರ್ಗಗಳ ಪತ್ರಿಕೆಗಳಿಗೆ ಪ್ರೋತ್ಸಾಹ ನೀಡಲು 4 ಪುಟಗಳ ಜಾಹೀರಾತು ನೀಡುವ ಐತಿಹಾಸಿಕ ಆದೇಶ ಹೊರಡಿಸಿದ್ದೆ. ಮಾಧ್ಯಮಗಳು ಕೇವಲ ನಗರದ ಸುದ್ದಿಗಳ ಬೆನ್ನತ್ತದೆ, ಗ್ರಾಮೀಣ ಭಾಗದ ಮತ್ತು ಶೋಷಿತ ವರ್ಗಗಳ ಧ್ವನಿಯಾಗಿ ಕೆಲಸ ಮಾಡಬೇಕು” ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಸಂಸದ ಡಾ. ಕೆ. ಸುಧಾಕರ್ ಅವರ ಪ್ರಯತ್ನದಿಂದಾಗಿ ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜು, ಕನ್ನಡ ಭವನ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳು ವೇಗ ಪಡೆದುಕೊಂಡಿವೆ ಎಂದು ಅವರು ಶ್ಲಾಘಿಸಿದರು.






