ಚಿಕ್ಕಬಳ್ಳಾಪುರ: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಯಶಸ್ವಿಯಾಗಿ 12 ವರ್ಷಗಳನ್ನು (PM Modi 12 Years) ಪೂರೈಸಿದೆ. ಈ ಮೂಲಕ ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ದೀರ್ಘಾವಧಿ ಸೇವೆ ಸಲ್ಲಿಸಿದ ‘ಚುನಾಯಿತ ಪ್ರಧಾನಿ’ ಎಂಬ ಹೆಗ್ಗಳಿಕೆಗೆ ನರೇಂದ್ರ ಮೋದಿ ಪಾತ್ರರಾಗಿದ್ದಾರೆ. 1952ರ ನಂತರದ ಸುದೀರ್ಘ ದಾಖಲೆಯನ್ನು ಮುರಿದು ಮುನ್ನಡೆದಿರುವ ಪ್ರಧಾನಿ ಮೋದಿಯವರ ಸಾಧನೆಯನ್ನು ಇಡೀ ಜಗತ್ತೇ ಕೊಂಡಾಡುತ್ತಿದೆ ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್ ಹರ್ಷ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 12 ವರ್ಷಗಳಲ್ಲಿ ಮೋದಿ ಸರ್ಕಾರ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕೈಗೊಂಡಿರುವ ಐತಿಹಾಸಿಕ ನಿರ್ಧಾರಗಳು ಹಾಗೂ ಜನಕಲ್ಯಾಣ ಯೋಜನೆಗಳ ಪಟ್ಟಿಯನ್ನು ಬಿಚ್ಚಿಟ್ಟರು.

ಮೋದಿ ಸರ್ಕಾರದ 12 ವರ್ಷಗಳ ಐತಿಹಾಸಿಕ ಮೈಲಿಗಲ್ಲುಗಳು:
-
ಸ್ವಚ್ಛ ಭಾರತ ಕ್ರಾಂತಿ: ದೇಶಾದ್ಯಂತ 11 ಕೋಟಿಗೂ ಅಧಿಕ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತ ಹೊಸ ದಾಖಲೆ ಬರೆದಿದೆ.
-
ಬ್ಯಾಂಕಿಂಗ್ ಕ್ರಾಂತಿ: ಬ್ಯಾಂಕ್ ರಾಷ್ಟ್ರೀಕರಣದ ನಂತರವೂ ಬ್ಯಾಂಕಿಂಗ್ ವ್ಯವಸ್ಥೆಯಿಂದ ವಂಚಿತರಾಗಿದ್ದ ಬಡವರಿಗಾಗಿ 58 ಕೋಟಿಗೂ ಹೆಚ್ಚು ‘ಜೀರೋ ಬ್ಯಾಲೆನ್ಸ್’ ಜನಧನ್ ಖಾತೆಗಳನ್ನು ತೆರೆಯಲಾಗಿದೆ.
-
ವಿಶ್ವಗುರು ಸ್ಥಾನ: ಕೋವಿಡ್ ಮಹಾಮಾರಿಯ ಕಠಿಣ ಸಂದರ್ಭದಲ್ಲಿ ಭಾರತದಲ್ಲೇ ಸ್ವದೇಶಿ ಲಸಿಕೆ ಉತ್ಪಾದಿಸಿ, ಜಗತ್ತಿನ 100ಕ್ಕೂ ಹೆಚ್ಚು ದೇಶಗಳಿಗೆ ನೆರವು ನೀಡುವ ಮೂಲಕ ಭಾರತ ತನ್ನ ಜಾಗತಿಕ ನಾಯಕತ್ವವನ್ನು ಸಾಬೀತುಪಡಿಸಿದೆ.
-
ರೈತ ಕಲ್ಯಾಣ ಯೋಜನೆಗಳು: ಪಿಎಂ ಕಿಸಾನ್ ಯೋಜನೆಯಡಿ ದೇಶದ ಕೋಟ್ಯಂತರ ರೈತರ ಖಾತೆಗಳಿಗೆ 4 ಲಕ್ಷ ಕೋಟಿ ರೂ.ಗೂ ಅಧಿಕ ಹಣವನ್ನು ನೇರವಾಗಿ ಜಮಾ ಮಾಡಲಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ 2,200 ರೂ. ಬೆಲೆ ಬಾಳುವ ಯೂರಿಯಾ ಗೊಬ್ಬರಕ್ಕೆ ಸಬ್ಸಿಡಿ ನೀಡಿ, ರೈತರಿಗೆ ಕೇವಲ 266 ರೂ.ಗೆ ತಲುಪಿಸಲಾಗುತ್ತಿದೆ. ಅಷ್ಟೇ ಅಲ್ಲದೆ, ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿಯನ್ನು 5 ಲಕ್ಷ ರೂ.ಗೆ ಏರಿಸಲಾಗಿದೆ.
ಅವಳಿ ಜಿಲ್ಲೆಗಳ ನೀರಿನ ಸಮಸ್ಯೆಗೆ ‘ಕೃಷ್ಣಾ ನದಿ’ ನೀರೇ ಶಾಶ್ವತ ಪರಿಹಾರ!
ಇದೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಅವರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳ ಜ್ವಲಂತ ನೀರಿನ ಸಮಸ್ಯೆಯ ಕುರಿತು ತೀವ್ರ ಕಳಕಳಿ ವ್ಯಕ್ತಪಡಿಸಿದರು.
“ನಮ್ಮ ಭಾಗದಲ್ಲಿ ರೇಷ್ಮೆ, ಹಾಲು, ಹೂವು ಬೆಳೆಯುವ ಕಷ್ಟಜೀವಿ ರೈತರಿದ್ದಾರೆ. ಕೃಷಿಗೆ ಯೋಗ್ಯವಾದ ಭೂಮಿಯೂ ಇದೆ. ಆದರೆ ಸೂಕ್ತ ನೀರಾವರಿ ಸೌಲಭ್ಯವಿಲ್ಲದೆ ಇಂದಿನ ಯುವಕರು ಹಳ್ಳಿಗಳನ್ನು ಬಿಟ್ಟು ಪಟ್ಟಣ ಸೇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನ ಸಂಸ್ಕರಿಸದ ಕೆಮಿಕಲ್ ಮಿಶ್ರಿತ ನೀರನ್ನು ಇಲ್ಲಿಗೆ ತಂದು ನಮ್ಮ ಫಲವತ್ತಾದ ಭೂಮಿಯನ್ನು ವಿಷಕಾರಿ ಮಾಡಲಾಗುತ್ತಿದೆ” ಎಂದು ಸೀಕಲ್ ರಾಮಚಂದ್ರಗೌಡ ಆತಂಕ ಹೊರಹಾಕಿದರು.
ಎತ್ತಿನಹೊಳೆ ಯೋಜನೆ ಇನ್ನೂ ನನೆಗುದಿಗೆ ಬಿದ್ದಿರುವುದರಿಂದ ನಮ್ಮ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರನ್ನು ತರುವುದೇ ಸೂಕ್ತ ಪರಿಹಾರ ಎಂದು ಅವರು ಪ್ರತಿಪಾದಿಸಿದರು. “ನಮ್ಮ ಗಡಿಯಲ್ಲೇ (ಆಂಧ್ರಪ್ರದೇಶ ಗಡಿ) ಹರಿಯುವ ಕೃಷ್ಣಾ ನದಿ ನೀರನ್ನು ಗೌರಿಬಿದನೂರು, ಬಾಗೇಪಲ್ಲಿ, ಚಿಂತಾಮಣಿ ಹಾಗೂ ಶಿಡ್ಲಘಟ್ಟ ಭಾಗಕ್ಕೆ ತರುವ ಅವಶ್ಯಕತೆಯಿದೆ. ಪ್ರಸ್ತುತ ಆಂಧ್ರಪ್ರದೇಶದಲ್ಲೂ ಎನ್ಡಿಎ ಮೈತ್ರಿ ಸರ್ಕಾರ ಅಧಿಕಾರದಲ್ಲಿದೆ. ಹೀಗಾಗಿ ನಮ್ಮ ಕೇಂದ್ರ ನಾಯಕರ ಮೂಲಕ ಅಲ್ಲಿನ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿ ಈ ಯೋಜನೆಯನ್ನು ಸಾಕಾರಗೊಳಿಸಲು ಪ್ರಯತ್ನಿಸಲಾಗುವುದು” ಎಂದರು.
ಪಕ್ಷಾತೀತ ಹೋರಾಟಕ್ಕೆ ಕರೆ
ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರಧಾನಿ ಮೋದಿಯವರು ಭೇಟಿ ನೀಡಿದ ಸಮಯದಲ್ಲೇ ನೀರಿನ ಸಮಸ್ಯೆಯ ಧ್ವನಿ ಗಟ್ಟಿಯಾಗಿದೆ. ಈಗಾಗಲೇ ಬಿಜೆಪಿಯ ಪ್ರಶಿಕ್ಷಣ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರ ಮುಂದೆಯೂ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಮುಂಬರುವ ದಿನಗಳಲ್ಲಿ ಜಿಲ್ಲೆಯ ರೈತ ಸಂಘಟನೆಗಳು, ಯುವಕರು ಹಾಗೂ ಎಲ್ಲಾ ರಾಜಕೀಯ ಪಕ್ಷಗಳ ಪ್ರಮುಖರನ್ನು ಒಗ್ಗೂಡಿಸಿಕೊಂಡು ‘ಕೃಷ್ಣಾ ನದಿ ನೀರಿಗಾಗಿ ಪಕ್ಷಾತೀತ ಹೋರಾಟ’ವನ್ನು ಹಮ್ಮಿಕೊಳ್ಳಲಾಗುವುದು ಎಂದು ರಾಮಚಂದ್ರಗೌಡ ಇದೇ ವೇಳೆ ಪ್ರಕಟಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಶಿಡ್ಲಘಟ್ಟದ ಮಾಜಿ ಶಾಸಕ ರಾಜಣ್ಣ, ಚಿಂತಾಮಣಿ ಮುಖಂಡ ವೇಣುಗೋಪಾಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎಚ್.ಎಸ್. ಮುರಳಿಧರ್, ಕೆ.ಬಿ. ಮುರಳಿ, ಮಧು ಸೂರ್ಯನಾರಾಯಣ ರೆಡ್ಡಿ, ರಾಷ್ಟ್ರೀಯ ಪರಿಷತ್ ಸದಸ್ಯ ಲಕ್ಷ್ಮೀನಾರಾಯಣ ಗುಪ್ತ ಸೇರಿದಂತೆ ಜಿಲ್ಲೆಯ ಹಲವು ಪ್ರಮುಖ ಮುಖಂಡರು ಹಾಗೂ ಮಂಡಲ ಅಧ್ಯಕ್ಷರು ಉಪಸ್ಥಿತರಿದ್ದರು.






