ಇಡೀ ದೇಶಾದ್ಯಂತ ತಲ್ಲಣ ಸೃಷ್ಟಿಸಿದ್ದ ನೀಟ್ (NEET UG 2026) ಪರೀಕ್ಷಾ ಅಕ್ರಮ ಹಗರಣದ ಅಸಲಿ ರೂವಾರಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ! ಮೇ 3 ರಂದು ನಡೆದಿದ್ದ ದೇಶದ ಅತ್ಯಂತ ದೊಡ್ಡ ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ, ಮೇ 12 ರಂದು ಪರೀಕ್ಷೆಯನ್ನೇ ರದ್ದುಗೊಳಿಸಲಾಗಿತ್ತು. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಿದ ಈ ಹಗರಣದ ಅಸಲಿ ಕಿಂಗ್ಪಿನ್ ಯಾರು ಎಂದು ತನಿಖೆ ನಡೆಸುತ್ತಿದ್ದ ಕೇಂದ್ರ ತನಿಖಾ ದಳಕ್ಕೆ (CBI) ಕೊನೆಗೂ ಯಶಸ್ಸು ಸಿಕ್ಕಿದೆ.
ಪುಣೆಯಲ್ಲಿ ಖಾಸಗಿ ಕೋಚಿಂಗ್ ಕ್ಲಾಸ್ ನಡೆಸುತ್ತಿದ್ದ ಕೆಮಿಸ್ಟ್ರಿ ಪ್ರೊಫೆಸರ್ ಪಿ.ವಿ. ಕುಲಕರ್ಣಿ ಎಂಬುವವರೇ ಈ ಇಡೀ ಜಾಲದ ಮಾಸ್ಟರ್ ಮೈಂಡ್ ಎಂದು ಸಿಬಿಐ ಪತ್ತೆಹಚ್ಚಿ, ಅವರನ್ನು ಬಂಧಿಸಿದೆ.

ಕಳ್ಳನಿಗೆ ಸಿಕ್ಕಿತ್ತು ಬೀಗದ ಕೈ: NTA ತಂಡದಲ್ಲೇ ಇದ್ದ ಪ್ರೊಫೆಸರ್!
ಸಿಬಿಐ ತನಿಖೆಯಿಂದ ಹೊರಬಿದ್ದಿರುವ ಸ್ಪೋಟಕ ಮಾಹಿತಿ ಏನೆಂದರೆ, ಬಂಧಿತ ಆರೋಪಿ ಪಿ.ವಿ. ಕುಲಕರ್ಣಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪರವಾಗಿ ಪ್ರಶ್ನೆ ಪತ್ರಿಕೆ ತಯಾರಿಸುವ ಪ್ರಕ್ರಿಯೆಯಲ್ಲಿ ಹಲವು ವರ್ಷಗಳಿಂದ ಭಾಗಿಯಾಗಿದ್ದರು. ಈ ಬಾರಿಯ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ಉನ್ನತ ತಂಡದಲ್ಲಿಯೂ ಇವರಿದ್ದರು! ಅಂದರೆ, ಬೇಲಿಯೇ ಎದ್ದು ಹೊಲ ಮೇಯ್ದ ಕಥೆಯಂತೆ, ಪರೀಕ್ಷೆಯ ರಹಸ್ಯ ಕಾಯಬೇಕಾದವರೇ ಪತ್ರಿಕೆಯನ್ನು ಸೋರಿಕೆ ಮಾಡಿದ್ದಾರೆ.
ಮೂಲತಃ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯವರಾದ ಕುಲಕರ್ಣಿ, ಪುಣೆಯಲ್ಲಿ ತಮ್ಮದೇ ಆದ ಖಾಸಗಿ ಕೋಚಿಂಗ್ ಕ್ಲಾಸ್ ನಡೆಸುತ್ತಿದ್ದರು. ತಮಗೆ ಸಿಕ್ಕ ಪ್ರಶ್ನೆ ಪತ್ರಿಕೆಯ ಪ್ರವೇಶವನ್ನು ಬಳಸಿಕೊಂಡು ತಮ್ಮದೇ ಕ್ಲಾಸ್ನ ಆಯ್ದ ವಿದ್ಯಾರ್ಥಿಗಳಿಗೆ ಪತ್ರಿಕೆಯನ್ನು ಹಂಚಿದ್ದರು.
ಮನೆಯಲ್ಲೇ ನಡೆದಿತ್ತು ‘ಸೀಕ್ರೆಟ್ ಕ್ಲಾಸ್’.. ಪ್ರಶ್ನೆ-ಉತ್ತರ ಡಿಕ್ಟೇಟ್ ಮಾಡಿದ್ದ ಕಿಂಗ್ಪಿನ್!
ಸಿಬಿಐ ನೀಡಿರುವ ಮಾಹಿತಿಯ ಪ್ರಕಾರ, ಏಪ್ರಿಲ್ ಕೊನೆಯ ವಾರದಲ್ಲಿ ಪಿ.ವಿ. ಕುಲಕರ್ಣಿ ಮತ್ತು ಅವರ ಜೊತೆಗಿದ್ದ ಮತ್ತೊಬ್ಬ ಆರೋಪಿ ಮನೀಶಾ ವಾಘ್ಮಾರೆ ಎಂಬಾಕೆ ಸೇರಿಕೊಂಡು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿದ್ದರು.
-
ಪುಣೆಯಲ್ಲಿರುವ ಕುಲಕರ್ಣಿ ನಿವಾಸದಲ್ಲೇ ಆಯ್ದ ವಿದ್ಯಾರ್ಥಿಗಳಿಗೆ ‘ವಿಶೇಷ ರಹಸ್ಯ ತರಗತಿ’ಗಳನ್ನು ನಡೆಸಲಾಗಿತ್ತು.
-
ಈ ಕ್ಲಾಸ್ನಲ್ಲಿ ಕುಲಕರ್ಣಿ ಅವರು ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆಯ ಪ್ರಶ್ನೆಗಳು, ಅದಕ್ಕೆ ನೀಡಲಾಗುವ ಆಯ್ಕೆಗಳು (Options) ಮತ್ತು ಸರಿಯಾದ ಉತ್ತರಗಳನ್ನು ನೇರವಾಗಿ ಡಿಕ್ಟೇಟ್ ಮಾಡಿದ್ದರು.
-
ವಿದ್ಯಾರ್ಥಿಗಳು ಅದನ್ನು ತಮ್ಮ ನೋಟ್ಬುಕ್ಗಳಲ್ಲಿ ಬರೆದುಕೊಂಡಿದ್ದರು.
ಟ್ವಿಸ್ಟ್ ಅಂದ್ರೆ ಇದೇ ನೋಡಿ: ಸಿಬಿಐ ಪೊಲೀಸರು ದಾಳಿ ನಡೆಸಿ ವಿದ್ಯಾರ್ಥಿಗಳ ಆ ಕೈಬರಹದ ನೋಟ್ಬುಕ್ಗಳನ್ನು ವಶಪಡಿಸಿಕೊಂಡಾಗ, ಅದರಲ್ಲಿ ಬರೆದಿದ್ದ ಪ್ರಶ್ನೆಗಳು ಮೇ 3ರಂದು ನಡೆದ ಅಸಲಿ ನೀಟ್ ಪರೀಕ್ಷೆಯ ಪ್ರಶ್ನೆಗಳಿಗೆ ಶೇ.100 ರಷ್ಟು ನಿಖರವಾಗಿ ಹೊಂದಿಕೆಯಾಗಿವೆ! ಈ ವಿಶೇಷ ತರಬೇತಿಗಾಗಿ ವಿದ್ಯಾರ್ಥಿಗಳಿಂದ ಮತ್ತು ಅವರ ಪೋಷಕರಿಂದ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಲಾಗಿತ್ತು.
ದೇಶಾದ್ಯಂತ ತನಿಖೆ ಚುರುಕು: ಇದುವರೆಗೆ 8 ಮಂದಿ ಅರೆಸ್ಟ್
ಈ ಹಗರಣ ಕೇವಲ ಪುಣೆಗೆ ಮಾತ್ರ ಸೀಮಿತವಾಗಿರಲಿಲ್ಲ. ಕುಲಕರ್ಣಿ ಇಬ್ಬರು ಪ್ರಮುಖ ಏಜೆಂಟ್ಗಳಿಗೆ ಭಾರೀ ಮೊತ್ತಕ್ಕೆ ಪ್ರಶ್ನೆ ಪತ್ರಿಕೆಯನ್ನು ಮಾರಾಟ ಮಾಡಿದ್ದರು. ಅವರು ಅದನ್ನು ಮಹಾರಾಷ್ಟ್ರದಾದ್ಯಂತ ಹಂಚಿದ್ದರು. ಸಿಬಿಐ ಅಧಿಕಾರಿಗಳು ತನಿಖೆಯ ಲಿಂಕ್ ಹಿಡಿದು ಹೊರಟಾಗ ದೇಶದ ಬೇರೆ ಬೇರೆ ಭಾಗಗಳಲ್ಲಿ ನೆಟ್ವರ್ಕ್ ಇರುವುದು ಬೆಳಕಿಗೆ ಬಂದಿದೆ.
ಪ್ರಸ್ತುತ ಜೈಪುರ, ಗುರುಗ್ರಾಮ್, ನಾಸಿಕ್, ಪುಣೆ ಮತ್ತು ಅಹಲ್ಯಾನಗರ ಸೇರಿದಂತೆ ಹಲವು ಕಡೆ ದಾಳಿ ನಡೆಸಿ ಇದುವರೆಗೆ ಒಟ್ಟು 8 ಆರೋಪಿಗಳನ್ನು ಬಂಧಿಸಲಾಗಿದೆ. ಈ ಪೈಕಿ 5 ಜನರನ್ನು ಈಗಾಗಲೇ 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಇನ್ನುಳಿದ ಇಬ್ಬರನ್ನು ಟ್ರಾನ್ಸಿಟ್ ರಿಮಾಂಡ್ ಮುಖಾಂತರ ದೆಹಲಿಗೆ ಕರೆದೊಯ್ದು ಹೆಚ್ಚಿನ ವಿಚಾರಣೆ ನಡೆಸಲು ಸಿಬಿಐ ಮುಂದಾಗಿದೆ.

ಲಕ್ಷಾಂತರ ಪ್ರಾಮಾಣಿಕ ವಿದ್ಯಾರ್ಥಿಗಳ ನಿದ್ದೆ ಗೆಡಿಸಿದ್ದ ಈ ಹಗರಣದ ಮೂಲ ಸಿಕ್ಕಿಬಿದ್ದಿರುವುದು ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಸಣ್ಣ ಸಮಾಧಾನ ತಂದಿದೆ. ಸದ್ಯ ಕೇಂದ್ರ ಸರ್ಕಾರ ಜೂನ್ 21 ಕ್ಕೆ ಮರು ಪರೀಕ್ಷೆ ನಡೆಸುವುದಾಗಿ ಘೋಷಿಸಿದ್ದು, ಮುಂದಿನ ವರ್ಷದಿಂದ ಪರೀಕ್ಷೆಯನ್ನು ಸಂಪೂರ್ಣವಾಗಿ ಆನ್ಲೈನ್ ಮಾಡಲು ನಿರ್ಧರಿಸಿದೆ.






