ನವದೆಹಲಿ: ಜನಸಾಮಾನ್ಯರ ಜೇಬಿಗೆ ಕತ್ತರಿತ್ರಿತ್ತಿದ್ದ, ನಂಬಿಸಿ ಮೋಸ ಮಾಡುತ್ತಿದ್ದ ಅಕ್ರಮ ಲೋನ್ ಆ್ಯಪ್ಗಳು (Loan Apps) ಹಾಗೂ ವಂಚನೆ ಎಸಗುತ್ತಿದ್ದ 3,718 ಮೊಬೈಲ್ ಅಪ್ಲಿಕೇಶನ್ಗಳನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ನಿಷೇಧಿಸಿದೆ. (Loan Apps Ban India). ಬಳಕೆದಾರರನ್ನು ವಂಚಿಸುತ್ತಿರುವ ಜಾಲಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವಾಲಯ ಈ ಮಹತ್ವದ ಹೆಜ್ಜೆ ಇಟ್ಟಿದೆ.

ಲೋಕಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿರುವ ಗೃಹ ವ್ಯವಹಾರಗಳ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್, ಸೈಬರ್ ಕದೀಮರ ವಂಚನೆಯ ಕರಾಳ ಮುಖದ ಬಗ್ಗೆ ಸಂಸತ್ತಿನಲ್ಲಿ ವಿವರ ಹಂಚಿಕೊಂಡಿದ್ದಾರೆ.
ಮಹತ್ವದ ಮುಖ್ಯಾಂಶಗಳು:
-
ಐಟಿ ಕಾಯ್ದೆಯ ಅಡಿ ಕ್ರಮ: ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವು (I4C) 2000ನೇ ಇಸವಿಯ ಐಟಿ ಕಾಯ್ದೆಯ ಸೆಕ್ಷನ್ 69(A) ಮತ್ತು 79(3)(b) ಅಡಿಯಲ್ಲಿ ಈ ಎಲ್ಲಾ 3,718 ಅಪ್ಲಿಕೇಶನ್ಗಳಿಗೆ ನಿರ್ಬಂಧ ವಿಧಿಸಿದೆ.
-
ಸಿಮ್ ಕಾರ್ಡ್ ಹಾಗೂ IMEI ಬ್ಲಾಕ್: ವಿವಿಧ ಪೊಲೀಸ್ ಇಲಾಖೆಗಳಿಂದ ಬಂದ ವರದಿಗಳ ಆಧಾರದ ಮೇಲೆ, ಸೈಬರ್ ವಂಚನೆಗಳಿಗೆ ಬಳಕೆಯಾಗುತ್ತಿದ್ದ 15.75 ಲಕ್ಷಕ್ಕೂ ಅಧಿಕ ಸಿಮ್ ಕಾರ್ಡ್ಗಳು ಹಾಗೂ 5.77 ಲಕ್ಷಕ್ಕೂ ಹೆಚ್ಚು IMEI ಸಂಖ್ಯೆಗಳನ್ನು ಬ್ಲಾಕ್ ಮಾಡಲಾಗಿದೆ.
-
ಜನರ ಕೋಟ್ಯಂತರ ಹಣ ಉಳಿತಾಯ: ಆನ್ಲೈನ್ ವಂಚನೆಗಳ ತಕ್ಷಣದ ದೂರು ದಾಖಲಿಸಲು 2021ರಲ್ಲಿ ಪ್ರಾರಂಭಿಸಲಾದ CFCFRMS (Citizen Financial Cyber Fraud Reporting and Management System) ಪೋರ್ಟಲ್ ಮೂಲಕ ಇದುವರೆಗೆ ಸಾರ್ವಜನಿಕರ ರೂ. 11,158 ಕೋಟಿಗೂ ಅಧಿಕ ಹಣ ವಂಚಕರ ಪಾಾಲಾಗುವುದನ್ನು ತಡೆಯಲಾಗಿದೆ.
ಅಕ್ರಮ ಆ್ಯಪ್ಗಳ ಹಾವಳಿಗೆ ಚೆಕ್
ಸಾಮಾನ್ಯ ಜನರಿಗೆ ಸುಲಭವಾಗಿ ಸಾಲ ಸಿಗುವ ಆಮಿಷವೊಡ್ಡಿ, ನಕಲಿ ಆ್ಯಪ್ಗಳು ಹೆಚ್ಚಿನ ಬಡ್ಡಿ ವಸೂಲಿ ಮಾಡಿ, ವೈಯಕ್ತಿಕ ಮಾಹಿತಿಗಳನ್ನು ದುರುಪಯೋಗಪಡಿಸಿಕೊಂಡು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ದೂರುಗಳು ಹೆಚ್ಚಿದ್ದವು. ಇದಕ್ಕೆ ಕಠಿಣ ಉತ್ತರ ನೀಡಿರುವ ಕೇಂದ್ರ ಸರ್ಕಾರ, ಸೈಬರ್ ಅಪರಾಧಗಳನ್ನು ತಡೆಯಲು ತಂತ್ರಜ್ಞಾನವನ್ನು ಮತ್ತಷ್ಟು ಬಲಪಡಿಸುತ್ತಿದೆ.

ಒಂದು ವೇಳೆ ನೀವೂ ಅಥವಾ ನಿಮ್ಮ ಸುತ್ತಮುತ್ತಲಿನವರು ಇಂತಹಾ ಯಾವುದೇ ಆನ್ಲೈನ್ ಆರ್ಥಿಕ ವಂಚನೆಗಳಿಗೆ ಒಳಗಾದರೆ, ತಕ್ಷಣವೇ 1930 ಸಹಾಯವಾಣಿಗೆ ಅಥವಾ ಅಧಿಕೃತ cybercrime.gov.in ಜಾಲತಾಣಕ್ಕೆ ದೂರು ನೀಡಿ.






