ನವದೆಹಲಿ: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ (B.K. Hariprasad) ಅವರ ಇತ್ತೀಚಿನ ಹೇಳಿಕೆಗಳು ಇದೀಗ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿವೆ. ‘ಗಾಂಧಿ-ಗೋಡ್ಸೆ-ಗೋವು’ ಕುರಿತಾದ ಅವರ ವಿವಾದಾತ್ಮಕ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, (Pralhad Joshi) “ಮೊದಲು ಸಾಂವಿಧಾನಿಕ ಹುದ್ದೆಗಳಿಗೆ ಗೌರವ ನೀಡಲು ಕಲಿಯಿರಿ” ಎಂದು ತಿರುಗೇಟು ನೀಡಿದ್ದಾರೆ.
ರಾಜಕೀಯ ಲಾಭಕ್ಕಾಗಿ ಸಮಾಜದ ಶಾಂತಿ ಕದಡಬೇಡಿ: ಜೋಶಿ ಕಿಡಿ
ಬಿ.ಕೆ. ಹರಿಪ್ರಸಾದ್ ಅವರ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿರುವ ಸಚಿವ ಪ್ರಹ್ಲಾದ ಜೋಶಿ, “ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಹಾಳುಗೆಡವಿ, ಕೇವಲ ರಾಜಕೀಯ ಲಾಭ ಪಡೆಯುವ ದುಸ್ಸಾಹಸವನ್ನು ಹರಿಪ್ರಸಾದ್ ಮಾಡುತ್ತಿದ್ದಾರೆ,” ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವ ಹೊತ್ತಿನಲ್ಲೇ, ಕಾಂಗ್ರೆಸ್ನ ಹೊಸ ಅಧ್ಯಕ್ಷರು ಅಧಿಕಾರದ ಮದದಲ್ಲಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸಲು ಯತ್ನಿಸುತ್ತಿದ್ದಾರೆ ಎಂದು ಜೋಶಿ ಕಿಡಿಕಾರಿದ್ದಾರೆ.

ಸಾಂವಿಧಾನಿಕ ಹುದ್ದೆಗಳ ಘನತೆಗೆ ಧಕ್ಕೆ ತರಬೇಡಿ
ಪ್ರಜಾಪ್ರಭುತ್ವದ ಮೌಲ್ಯಗಳನ್ನು ನೆನಪಿಸಿರುವ ಸಚಿವರು, “ಪ್ರಧಾನ ಮಂತ್ರಿ ಅಥವಾ ಮುಖ್ಯಮಂತ್ರಿಗಳು ಕೋಟ್ಯಂತರ ಜನರ ಮತಗಳ ಮೂಲಕ ಆಯ್ಕೆಯಾದವರು. ರಾಜಕೀಯ ಪಕ್ಷಗಳ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಇರಬಹುದು, ಆದರೆ ಸಾಂವಿಧಾನಿಕ ಹುದ್ದೆಗಳನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ಇಂತಹ ಹುದ್ದೆಗಳ ಕುರಿತು ಕೀಳುಮಟ್ಟದ ಟೀಕೆಗಳನ್ನು ಮಾಡುವುದು ಸಂಸ್ಕೃತಿಹೀನತೆಯ ಲಕ್ಷಣ,” ಎಂದು ಹರಿಪ್ರಸಾದ್ ವಿರುದ್ಧ ವಾಗ್ದಾಳಿ ನಡೆಸಿದರು.
“ಗಾಂಧೀಜಿ ತತ್ವಗಳು ಇಂದಿನ ಕಾಂಗ್ರೆಸ್ಸಿಗರಿಗೆ ಬರೀ ಬಾಯಿಮಾತು”
ಮಹಾತ್ಮ ಗಾಂಧೀಜಿಯವರ ಅಹಿಂಸೆಯ ಮಾರ್ಗದ ಬಗ್ಗೆ ಮಾತನಾಡಿದ ಜೋಶಿ, “ಗಾಂಧೀಜಿಯವರ ಅಹಿಂಸೆಯು ಇಂದಿನ ಕಾಂಗ್ರೆಸ್ ನಾಯಕರಿಗೆ ಕೇವಲ ಬಾಯಿಮಾತಾಗಿದೆ. ವಾಸ್ತವದಲ್ಲಿ ನಕಲಿ ಗಾಂಧಿಗಳ ಜೊತೆ ಸೇರಿಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳುವುದೇ ಇವರ ಗುರಿ,” ಎಂದು ಲೇವಡಿ ಮಾಡಿದ್ದಾರೆ.
ತುರ್ತು ಪರಿಸ್ಥಿತಿ, ಸಿಖ್ ಹತ್ಯಾಕಾಂಡದಂತಹ ಕಾಂಗ್ರೆಸ್ ಆಡಳಿತದ ಕಹಿ ಘಟನೆಗಳನ್ನು ಉಲ್ಲೇಖಿಸಿರುವ ಸಚಿವರು, ತಮ್ಮ ಆಡಳಿತದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ನಾಯಕರು ಸದಾ ಸಮಾಜವನ್ನು ಒಡೆಯುವ ವಿಭಜಕ ಹೇಳಿಕೆಗಳ ಮೊರೆ ಹೋಗುತ್ತಾರೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ಗೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ: ಎಚ್ಚರಿಕೆ
ಕಾಂಗ್ರೆಸ್ ಪಕ್ಷ ಯಾವಾಗಲೂ ತುಷ್ಟೀಕರಣ ಮತ್ತು ಓಲೈಕೆ ರಾಜಕಾರಣವನ್ನೇ ನೆಚ್ಚಿಕೊಂಡಿದೆ ಎಂದು ದೂರಿದ ಪ್ರಹ್ಲಾದ ಜೋಶಿ, ಜನಕಲ್ಯಾಣವನ್ನು ಮರೆತ ಕಾಂಗ್ರೆಸ್ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದ್ದಾರೆ.






