ಚಿಕ್ಕಬಳ್ಳಾಪುರ ರಾಜಕಾರಣದಲ್ಲಿ ತೀವ್ರ ಕುತೂಹಲ ಹಾಗೂ ಸಂಚಲನ ಮೂಡಿಸಿರುವ ಬೆಳವಣಿಗೆಯೊಂದರಲ್ಲಿ, ಬಾಗೇಪಲ್ಲಿಯ ಕಾಂಗ್ರೆಸ್ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ (Bagepalli MLA S.N. Subbareddy) ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿರುವುದು ಅವರ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ಹೈಕಮಾಂಡ್ ನಿರ್ಧಾರದಿಂದ ನೊಂದಿರುವ ಕಾರ್ಯಕರ್ತರು ನಾಳೆ (ಬುಧವಾರ) ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರವನ್ನು ಸಂಪೂರ್ಣವಾಗಿ ಬಂದ್ ಮಾಡಲು ಕರೆ ನೀಡಿದ್ದಾರೆ.

ಸಭೆಯಲ್ಲಿ ಪ್ರಮುಖ ನಿರ್ಣಯಗಳು:
ಕ್ಷೇತ್ರ ಬಂದ್: ಬಾಗೇಪಲ್ಲಿ, ಗುಡಿಬಂಡೆ ಹಾಗೂ ಚೇಳೂರು ತಾಲೂಕುಗಳನ್ನು ಒಳಗೊಂಡಂತೆ ಸಂಪೂರ್ಣ ಬಂದ್ ಆಚರಿಸಲು ತೀರ್ಮಾನಿಸಲಾಗಿದೆ.
ಸಾಮೂಹಿಕ ರಾಜೀನಾಮೆ: ಕಾಂಗ್ರೆಸ್ ಪಕ್ಷದ ವಿವಿಧ ಹುದ್ದೆಗಳು ಹಾಗೂ ಘಟಕಗಳ ಪದಾಧಿಕಾರಿಗಳು ತಮ್ಮ ಸ್ಥಾನಗಳಿಗೆ ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದಾರೆ.
ಕಾರ್ಯಕರ್ತರ ಆಕ್ರೋಶದ ಮಾತುಗಳು
ಶಾಸಕರ ಗೃಹ ಕಚೇರಿಯಲ್ಲಿ ನಡೆದ ತುರ್ತು ಸಭೆಯ ಬಳಿಕ ಮಾತನಾಡಿದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನರೇಂದ್ರ, ಪಕ್ಷದ ನಾಯಕರ ಧೋರಣೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ʻಆಪರೇಷನ್ ಕಮಲʼದ ಸಂದರ್ಭದಲ್ಲಿ ಬಿಜೆಪಿಯಿಂದ ಆಕರ್ಷಕ ಆಫರ್‌ಗಳು ಬಂದಿದ್ದರೂ ಸಹ ಸುಬ್ಬಾರೆಡ್ಡಿ ಅವರು ಪಕ್ಷಾಂತರ ಮಾಡದೆ ಪ್ರಾಮಾಣಿಕವಾಗಿ ಉಳಿದುಕೊಂಡಿದ್ದರು. ಆದರೆ, ಈಗ ಸಚಿವ ಸ್ಥಾನ ನೀಡುತ್ತೇವೆ ಎಂದು ನಂಬಿಸಿ ಕೊನೆಕ್ಷಣದಲ್ಲಿ ಕೈಬಿಟ್ಟಿರುವುದು ಕ್ಷೇತ್ರದ ಲಕ್ಷಾಂತರ ಕಾರ್ಯಕರ್ತರಿಗೆ ಹಾಗೂ ಬೆಂಬಲಿಗರಿಗೆ ಎಸಗಿರುವ ದೊಡ್ಡ ಅವಮಾನ ಎಂದು ಕಿಡಿಕಾರಿದರು.

ಪಕ್ಷಕ್ಕಾಗಿ ನಿಷ್ಠೆಯಿಂದ ಕೆಲಸ ಮಾಡಿದವರಿಗೆ ಸಿಕ್ಕಿರುವ ಈ ಅನ್ಯಾಯವನ್ನು ಖಂಡಿಸಿ ನಾಳೆಯ ಬಂದ್‌ಗೆ ಸಂಪೂರ್ಣ ಬೆಂಬಲ ಸೂಚಿಸುವಂತೆ ಹಾಗೂ ಎಲ್ಲರೂ ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಲಾಗಿದೆ..






